ADVERTISEMENT

ಸಾಹಿತಿಗಳಿಂದ ಕನ್ನಡ ಉಳಿದಿಲ್ಲ: ಹೋರಾಟಗಾರ ಪ.ಮಲ್ಲೇಶ್

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 13:37 IST
Last Updated 29 ನವೆಂಬರ್ 2020, 13:37 IST
ಪ.ಮಲ್ಲೇಶ್
ಪ.ಮಲ್ಲೇಶ್   

ಮೈಸೂರು: ಕನ್ನಡ ಉಳಿದಿರುವುದು ಬೀದಿಗಿಳಿದು ಪ್ರಾಮಾಣಿಕವಾಗಿ ಹೋರಾಟ ಮಾಡಿದವರಿಂದಲೇ ಹೊರತು ಸಾಹಿತಿಗಳಿಂದ ಅಲ್ಲ ಎಂದು ಹೋರಾಟಗಾರ ಪ.ಮಲ್ಲೇಶ್ ತಿಳಿಸಿದರು.‌

ಇಲ್ಲಿ ಭಾನುವಾರ ನಡೆದ ‘ತರಾಸು ಜನ್ಮ ಶತಮಾನೋತ್ಸವ ಸಮಾರಂಭ’ದಲ್ಲಿ ಅವರು ಮಾತನಾಡಿದರು.

ಕುವೆಂಪು, ಭೈರಪ್ಪ ಸೇರಿದಂತೆ ಅನೇಕ ಸಾಹಿತಿಗಳನ್ನು ಬರೆಯಿರಿ ಎಂದು ಯಾರೂ ಕೇಳಿಲ್ಲ. ಅವರು ತಮ್ಮ ವೈಯಕ್ತಿಕ ಇಚ್ಛೆಯಿಂದಷ್ಟೇ ಬರೆದರು. ಅವರಿಗೆ ಈ ಸಮಾಜ ಸಾಕಷ್ಟು ಗೌರವ ಕೊಟ್ಟಿದೆ. ಅದಕ್ಕಾದರೂ ಅವರು ಬೀದಿಗಿಳಿದು ಹೋರಾಟ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ADVERTISEMENT

ಕನ್ನಡಕ್ಕಾಗಿ ಕೈಯೆತ್ತು ಕಲ್ಪವೃಕ್ಷ ಸಿಗತ್ತದೆ ಎಂದರು. ಆದರೆ, ಬರೆದವರಿಗಷ್ಟೇ ಆ ಕಲ್ಪವೃಕ್ಷ ಸಿಕ್ಕಿತು. ಮನೆ, ಮಕ್ಕಳನ್ನು ಬಿಟ್ಟು ಬೀದಿಗಿಳಿದು ಕೈಯೆತ್ತಿದ್ದ ಪ್ರಾಮಾಣಿಕರಿಗೆ ಏನೂ ಸಿಗಲಿಲ್ಲ. ತರಾಸು, ಅನಕೃ ಅವರಂತಹ ಸಾಹಿತಿಗಳು ತೀರಾ ವಿರಳ ಎಂದು ಬೇಸರ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ₹ 500 ಕೋಟಿದ್ದು ಸರಿಯಲ್ಲ. ಬಸವಣ್ಣ ಬದುಕಿದ್ದರೆ ನಿಜಕ್ಕೂ ನೇಣು ಹಾಕಿಕೊಂಡು ಬಿಡುತ್ತಿದ್ದರು. ಮಠಗಳೇನು ಉತ್ತು, ಬಿತ್ತಿದ್ದರಾ. ಅವರಿಗೆ ಅಷ್ಟೊಂದು ಆಸ್ತಿ ಹೇಗೆ ಬಂತು. ಎಲ್ಲ ಮಠಗಳೂ ಜಾತಿಯನ್ನು ಹಿಡಿದಿಡುವ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದರು.

ಜಾತಿಗಳ ಗುಂಪಿನಿಂದ ಸಾಹಿತಿಗಳಿಗೆ ಗೌರವ ಸಿಗುತ್ತಿದೆ. ಆದರೆ, ಕನ್ನಡಕ್ಕಾಗಿ ಬರೆದು, ಹೋರಾಡಿದ ಅನಕೃ ಮತ್ತು ತರಾಸು ಅಂತಹವರನ್ನು ನೆನಪಿಸಿಕೊಳ್ಳುವ ಕೆಲಸವೂ ಆಗುತ್ತಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.