ADVERTISEMENT

ಕನ್ನಡ ಸಾಹಿತ್ಯಕ್ಕೆ ಆಧುನಿಕತೆಯ ಸ್ಪರ್ಶ ಅಗತ್ಯ: ಬಾನು ಮುಷ್ತಾಕ್

ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 3:20 IST
Last Updated 6 ಜುಲೈ 2025, 3:20 IST
<div class="paragraphs"><p>ಬಾನು ಮುಷ್ತಾಕ್</p></div>

ಬಾನು ಮುಷ್ತಾಕ್

   

ಮೈಸೂರು: ‘ಕನ್ನಡದಲ್ಲಿ ಅದ್ಭುತ ಸಾಹಿತ್ಯ ಭಂಡಾರವಿದ್ದು, ಅವು ಪ್ರಕಾಶಕ್ಕೆ ಬರಲು ಆಧುನಿಕ ವ್ಯವಸ್ಥೆ ಬಳಸಿಕೊಳ್ಳಬೇಕು. ಹಾಗಾದಾಗ ನಮ್ಮ ಸಾಹಿತ್ಯ ಜಗತ್ತಿಗೆ ಪಸರಿಸಲು ಸಾಧ್ಯ’ ಎಂದು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಸಂಘದಿಂದ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿ ಪ್ರಶಸ್ತಿ ಪಡೆದ ಅನುಭವಗಳನ್ನು ಹಂಚಿಕೊಂಡರು.

ADVERTISEMENT

‘ವಿದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸೃಜನಾತ್ಮಕ ಬರಹದ ಕುರಿತಾಗಿ ಪಠ್ಯವಿದೆ. ಅಲ್ಲಿ ಕಥೆ, ಕಾವ್ಯ ಬರೆಯುವುದನ್ನೂ ಕಲಿಯುತ್ತಾರೆ. ಈಚೆಗೆ ಅವರಲ್ಲೂ ವಿಷಯದ ಭಿನ್ನತೆ ಕಡಿಮೆಯಾಗಿದೆ. ಏಕತಾನತೆ ಇದೆ. ಆದರೆ ಭಾರತದ ಸಾಹಿತ್ಯವು ಭಿನ್ನವಾಗಿದೆ, ಹೀಗಾಗಿ ನಮ್ಮಲ್ಲಿ ಸಾಹಿತ್ಯ ಪರಂಪ‍ರೆ ಗಟ್ಟಿಯಾಗಿದ್ದು, ಅದನ್ನು ಪ್ರಪಂಚಕ್ಕೆ ತಿಳಿಸಬೇಕಿದೆ’ ಎಂದರು.

‘ನಾನು ಬದುಕಿನ ವಿಶ್ವವಿದ್ಯಾಲಯವನ್ನು ಅನುಸರಿಸಿದ್ದು, ನನ್ನ ಬರಹಗಳು ಪಠ್ಯದ ಉಲ್ಲೇಖವಿಲ್ಲದೆ, ಬದುಕಿನ ಆಲೋಚನೆಗಳನ್ನು ಒಳಗೊಂಡಿದೆ ಎಂದು ತೀರ್ಪುಗಾರರೊಂದಿಗೆ ನಿಲುವು ಹಂಚಿಕೊಂಡಿದ್ದೆ. ಪ್ರಶಸ್ತಿ ಸಿಕ್ಕಿದ ಬಳಿಕ ಪ್ರಪಂಚದಾದ್ಯಂತ ಸ್ಪಂದನೆ ದೊರೆಯುತ್ತಿದ್ದು, ಸಾಹಿತ್ಯದ ಹಬ್ಬಗಳಲ್ಲಿ ಭಾಗವಹಿಸಲು ವಿವಿಧ ದೇಶದಿಂದ ಆಹ್ವಾನ ಬರುತ್ತಿದೆ. ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳದಲ್ಲಿ ವಿಶೇಷ ಪ್ರೀತಿ ನೀಡುತ್ತಿದ್ದಾರೆ. 2026ರ ತೀರ್ಪುಗಾರರ ಪಟ್ಟಿಯಲ್ಲಿ ಭಾರತೀಯ ಮಹಿಳೆಯೂ ಆಯ್ಕೆಯಾಗಿದ್ದು ಹೆಮ್ಮೆಯ ವಿಚಾರ’ ಎಂದು ಹೇಳಿದರು.

ಸೀಮಿತವಲ್ಲ: ‘ಕಟ್ಟಳೆಗಳು, ಪಿತೃ ಪ್ರಾಧಾನ್ಯತೆಯ ನಿರಾಕರಣೆ ಮುಸ್ಲಿಂ ಸಮುದಾಯಕ್ಕೆ ಸೀಮಿತವಾಗಿಲ್ಲ. ಇದು ಸಮುದಾಯದ ವೃತ್ತದಲ್ಲಿ ಬರುತ್ತದೆ, ಪ್ರಪಂಚಕ್ಕೆ ಅನ್ವಯವಾಗುವ ಸಮಸ್ಯೆ ಇದು. ಎಲ್ಲಿ ಗಂಡು, ಹೆಣ್ಣಿದೆ ಅಲ್ಲಿ ನನ್ನ ಕಥೆಯಲ್ಲಿ ಬರುವ ಸಮಸ್ಯೆಗಳಿವೆ. ನಾನು ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ, ಕನ್ನಡ ಓದಿದ ಕಾರಣ ಅನಿವಾರ್ಯವಾಗಿ ಮುಸ್ಲಿಂ ಪರಿಸರದ ಮೂಲಕ ಜಗತ್ತನ್ನು ಕಾಣುತ್ತಾ, ಕನ್ನಡದಲ್ಲಿ ಬರೆಯಬೇಕಾಯಿತು’ ಎಂದು ತಿಳಿಸಿದರು. 

‘ಇಂದಿನ ಸಮಾಜದಲ್ಲಿ ಅನುವಾದ ಅಗತ್ಯ. ಸರ್ಕಾರ ಕೃಷಾಪೋಷಿತ ಅನುವಾದಕ್ಕೆ ಹೆಚ್ಚಾಗಿ ಎಲ್ಲಾ ಸಾಹಿತಿಗಳು ಇದಕ್ಕೆ ಪ್ರಯತ್ನಿಸಬೇಕು. ಕೇರಳದಲ್ಲಿ ಈ ಸಂಸ್ಕೃತಿ ಹೆಚ್ಚಿದೆ. ಇದರಿಂದಾಗಿ ನನ್ನ ಕೃತಿಗಳೆಲ್ಲವೂ ಮಲಯಾಳಂಗೆ ಅನುವಾದವಾಗಿದೆ. ಅಲ್ಲಿನ ಜನರನ್ನೂ ನಾನು ತಲುಪಲು ಸಾಧ್ಯವಾಗಿದೆ. ನಮ್ಮಲ್ಲೂ ಆ ಅಭಿರುಚಿ ಬೆಳೆಯಬೇಕು’ ಎಂದರು.

‘ಸಂವಿಧಾನ ಛತ್ರಿಯಿದ್ದಂತೆ, ಅದನ್ನು ಸರಿಯಾಗಿ ಬಳಸಿ ರಕ್ಷಣೆ ಪಡೆಯಬೇಕು. ಸಾಮಾಜಿಕ ದುಷ್ಟ ಆಚರಣೆ ಚಾಲ್ತಿಯಲ್ಲಿದ್ದು, ಸಾಮಾಜಿಕ ಸಾಮರಸ್ಯದ ಬಗ್ಗೆ ಚಿಂತಿಸಬೇಕು. ಅಕ್ಷರ ಮತ್ತು ಬಹುತ್ವದ ನೆಲೆಯನ್ನು ಜನರಲ್ಲಿ ಬಿತ್ತಿದರೆ ಶಾಂತಿ ಸಾಧ್ಯ. ಇಲ್ಲದಿದ್ದರೆ ರಕ್ತದ ಕಲೆ ಹೆಚ್ಚಾಗುತ್ತವೆ’ ಎಂದು ಸಲಹೆ ನೀಡಿದರು.

ಲಂಕೇಶರು ನಿಮ್ಮನ್ನು ರೂಪಿಸಿದರೆಂಬ ಮಾತಿದೆ ಎಂಬ ಪ್ರಶ್ನೆಗೆ, ‘ವೈಯಕ್ತಿಕ ಸಾಮರ್ಥ್ಯ ಇದ್ದರೆ ಬೆಳೆಯುತ್ತಾರೆ. ಅದು ನನ್ನಲ್ಲಿ ಮೊದಲಿನಿಂದಲೂ ಇತ್ತು. ಲಂಕೇಶ್ ಅವಕಾಶ ಕೊಟ್ಟರು. ಆದರೆ ಕೈಹಿಡಿದು ಬರೆಯಲಿಲ್ಲ. ನಾನೇ ಬರೆಯಬೇಕಾಯಿತಲ್ಲವೇ’ ಎಂದು ಉತ್ತರಿಸಿದರು.

‘ಎರಡು ಕೊನೆಯ ಕತ್ತಿಯಲ್ಲಿನ ನಡಿಗೆ’

‘ಸಭೆಯೊಂದರಲ್ಲಿ ಮೌನ ಎಂಬುದು ವಿನಾಶಕಾರಿ. ರಾಜಸಭೆಯಲ್ಲಿ ದ್ರೌಪದಿಗೆ ಅವಮಾನ ಆದಾಗ ಭೀಷ್ಮರಂತಹ ಹಿರಿಯರು ಮೌನವಾಗಿದ್ದುದು ಮಹಾಭಾರತಕ್ಕೆ ಕಾರಣವಾಯಿತು. ಯುದ್ಧ ವಿನಾಶಕ್ಕೆ ಕಾರಣವಾಯಿತು ಎಂದು ಉತ್ತರಿಸಿದ್ದೆ. ಮರುದಿನ ಪತ್ರಕರ್ತರು ಮುಸ್ಲಿಂ ಮಹಿಳೆಯಾಗಿ ನಮ್ಮ ಪುರಾಣ ಕೆದಕುವ ಅಗತ್ಯ ಏನು ಎಂದು ಪ್ರಶ್ನೆ ಮಾಡಿದ್ದರು. ಮುಸ್ಲಿಂ ಧರ್ಮದಲ್ಲೂ ನಮ್ಮ ಒಳಗಿನ ವಿಚಾರವನ್ನು ತೆಗೆದುಕೊಂಡು ಬೇರೆ ಜನಾಂಗಕ್ಕೆ ತಿಳಿಸುತ್ತೀಯ. ಅದರ ಬದಲು ಉರ್ದುವಿನಲ್ಲೇ ಬರೆದುಕೋ ಎಂಬ ಮಾತುಗಳು ಕೇಳಿಬರುತ್ತಿತ್ತು. ಹೀಗಾಗಿ ನನ್ನ ಬರವಣಿಗೆ ಎರಡು ಕೊನೆಯ ಕತ್ತಿಯಲ್ಲಿ ನಡೆದವು’ ಎಂದು ಬಾನು ಮುಷ್ತಾಕ್‌ ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.