ADVERTISEMENT

ತುಂಬಿ ಹರಿಯುತ್ತಿರುವ ಕಪಿಲಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 6:23 IST
Last Updated 28 ಜುಲೈ 2025, 6:23 IST
ನಂಜನಗೂಡಿನ ಕಪಿಲಾ ನದಿ ಸ್ನಾನ ಘಟ್ಟದ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಿದೆ
ನಂಜನಗೂಡಿನ ಕಪಿಲಾ ನದಿ ಸ್ನಾನ ಘಟ್ಟದ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಿದೆ   

ನಂಜನಗೂಡು: ಕಬಿನಿ ಜಲಾಶಯದಿಂದ ನದಿಗೆ 51 ಸಾವಿರ ಕ್ಯೂಸೆಕ್‌ ನೀರು ಬಿಟ್ಟಿರುವುದರಿಂದ ನಗರದಲ್ಲಿ ಭಾನುವಾರ ಕಪಿಲಾ ನದಿ ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.

ಕೇರಳದ ವಯನಾಡಿನಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 40 ಸಾವಿರ, ತಾರಕ ಜಲಾಶಯದಿಂದ 9 ಸಾವಿರ, ನಗು ಜಲಾಶಯದಿಂದ 2 ಸಾವಿರ ಸೇರಿದಂತೆ ಒಟ್ಟಾರೆ 51 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಪರಿಣಾಮವಾಗಿ ನಗರದ ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಹದಿನಾರು ಕಾಲು ಮಂಟಪ ಭಾಗಶಃ ಮುಳುಗಿದೆ. ಮುಡಿಕಟ್ಟೆಯ ಬಾಗಿಲಿನವರೆಗೂ ನೀರು ಚಾಚಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಅಳವಡಿಸಿ, ಭಕ್ತರು ನದಿಯ ಸ್ನಾನಘಟ್ಟಕ್ಕೆ ತೆರಳದಂತೆ ನಿಷೇಧ ಹೇರಲಾಗಿದೆ.

ದೇವಾಲಯಕ್ಕೆ ಆಗಮಿಸಿದ ಭಕ್ತರು ದಾಸೋಹ ಭವನದಲ್ಲಿ ಪಕ್ಕದಲ್ಲಿರುವ ಸ್ನಾನದ ಕೊಠಡಿಯಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ತೆರಳಬೇಕಾಗಿದೆ. ಕಪಿಲಾ ನದಿಯ ಉಪನದಿ ಗುಂಡ್ಲು ನದಿಗೆ ಕಪಿಲಾ ನದಿಯ ಹಿನ್ನಿರು ಸೇರಿ ಪ್ರವಾಹ ಉಂಟಾಗಿದ್ದು, ಸಮೀಪದ ಪರಶುರಾಮ ದೇವಾಲಯ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ನದಿ ಪಾತ್ರದ ಅಯ್ಯಪ್ಪ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಾಲಯದ ಆವರಣಕ್ಕೆ ನೀರು ನುಗ್ಗಿದೆ, ನದಿಗೆ ಇನ್ನೂ ನೀರು ಹೆಚ್ಚಾದಲ್ಲಿ ಶ್ರೀಕಂಠೇಶ್ವರ ದೇವಾಲಯದ ಆವರಣಕ್ಕೂ ನೀರು ನುಗ್ಗುವ ಭೀತಿ ಎದುರಾಗಿದೆ.

ADVERTISEMENT

5 ಮನೆಗಳು ಜಲಾವೃತ: ಗುಂಡ್ಲು ನದಿಯ ಪ್ರವಾಹದಿಂದಾಗಿ ನಗರದ ಹಳ್ಳದ ಕೇರಿಯ ಐದು ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ನಗರದ ತೋಪಿನ ಬೀದಿ, ಕುರುಬಗೇರಿ, ಒಕ್ಕಲಗೇರಿ, ಸರಸ್ವತಿ ಕಾಲೊನಿ, ರಾಜಾಜಿನಗರ, ತಮ್ಮಡಗೇರಿ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದ್ದು ನಿವಾಸಿಗಳು ಆತಂಕದಲ್ಲಿದ್ದಾರೆ.

ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಸುದ್ದಿಗಾರರೊಂದಿಗೆ ಮಾತನಾಡಿ, ಜನರು ಆತಂಕಗೊಳ್ಳಬೇಕಿಲ್ಲ, ತಾಲ್ಲೂಕು ಆಡಳಿತ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ನದಿಯ ನೀರಿನಲ್ಲಿ ಏರಿಕೆ ಕಂಡಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು. ನದಿ ಪಾತ್ರದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಮನವಿ ಮಾಡಿದರು.

ನಂಜನಗೂಡಿನ ಪರಶುರಾಮ ದೇವಾಲಯ ಕಪಿಲಾ ನದಿ ಪ್ರವಾಹದಿಂದ ಮುಳುಗಿದೆ
ನಂಜನಗೂಡಿನ ಹಳ್ಳದ ಕೇರಿಯಲ್ಲಿ ಕಪಿಲಾ ನದಿ ಪ್ರವಾಹದಿಂದಾಗಿ ಮನೆಗಳು ಜಲಾವೃತವಾಗಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.