ADVERTISEMENT

ನೆರೆ ಪರಿಹಾರ| ನಿಯೋಗ ಒಯ್ಯುವ ಅಗತ್ಯವಿಲ್ಲ: ಕಬಿನಿಗೆ ಬಾಗಿನ ಅರ್ಪಿಸಿದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 20:00 IST
Last Updated 7 ಸೆಪ್ಟೆಂಬರ್ 2019, 20:00 IST
ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಬಾಗಿನ ಅರ್ಪಿಸಿದರು. ಶಾಸಕ ಸಿ.ಅನಿಲ್‌ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಶ್ರೀನಿವಾಸಪ್ರಸಾದ್ ಇದ್ದಾರೆ
ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಬಾಗಿನ ಅರ್ಪಿಸಿದರು. ಶಾಸಕ ಸಿ.ಅನಿಲ್‌ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಶ್ರೀನಿವಾಸಪ್ರಸಾದ್ ಇದ್ದಾರೆ   

ಬೀಚನಹಳ್ಳಿ (ಮೈಸೂರು): ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ, ರಾಜ್ಯದಲ್ಲಿ ನೆರೆಯಿಂದ ಉಂಟಾಗಿರುವ ಹಾನಿಯ ಅರಿವಿದೆ. ಇಲ್ಲಿಗೆ ಭೇಟಿ ನೀಡಿದ ವೇಳೆಯೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ಮತ್ತೆ ನಿಯೋಗ ಕೊಂಡೊಯ್ಯುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಇಲ್ಲಿ ಹೇಳಿದರು.

ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೀಘ್ರವೇ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ 1.25 ಲಕ್ಷ ಮನೆಗಳು ಹಾನಿಗೀಡಾಗಿವೆ. ಇನ್ನುಳಿದ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಬದಿಗೊತ್ತಿ ಸಂತ್ರಸ್ತರಿಗೆ ಸೂರು ಒದಗಿಸಲು ಮೊದಲ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದಾಗಿ ಅವರು ತಿಳಿಸಿದರು.

ADVERTISEMENT

‘ಕೆಆರ್‌ಎಸ್‌, ಕಬಿನಿ ಜಲಾಶಯ ತುಂಬಿ ಈಗಾಗಲೇ ತಮಿಳುನಾಡಿಗೆ ಸಾಕಷ್ಟು ನೀರು ಹರಿದಿರುವುದರಿಂದ ಜಲ ವಿವಾದಕ್ಕೆ ಅವಕಾಶವೇ ಇಲ್ಲ. ಇದರಿಂದ ನೆಮ್ಮದಿ ಸಿಕ್ಕಂತಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

ಅಧಿಕಾರಿಗಳನ್ನು ಪದೇ ಪದೇ ವರ್ಗಾಯಿಸುವುದಿಲ್ಲ. ಒಮ್ಮೆ ವರ್ಗಗೊಂಡ ಅಧಿಕಾರಿ, ಅದೇ ಸ್ಥಳದಲ್ಲಿ ಒಂದೆರೆಡು ವರ್ಷ ಕೆಲಸ ಮಾಡುವಂತೆ ನೋಡಿಕೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಹು ವರ್ಷಗಳ ಬಳಿಕ ಭರ್ತಿಯಾದ ಎಚ್.ಡಿ‌.ಕೋಟೆ ತಾಲ್ಲೂಕಿನ ತಾರಕ ಜಲಾಶಯ ಹಾಗೂ ನುಗು ಜಲಾಶಯಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ಬಾಗಿನ‌ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.