ಕೆಡಿಪಿ ಸಭೆ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ‘ಪ್ರಜಾವಾಣಿ’ ವರದಿಯನ್ನು ಪ್ರಸ್ತಾಪಿಸಿದರು.
ಜಿಲ್ಲೆಯಲ್ಲಿ ಆಗಿರುವ ರೈತರ ಆತ್ಮಹತ್ಯೆ ಹಾಗೂ ಹಲವು ಪ್ರಕರಣಗಳಲ್ಲಿ ಪರಿಹಾರ ದೊರೆಯದಿರುವ ಬಗ್ಗೆ ಪ್ರಕಟವಾಗಿದ್ದ ವರದಿಯನ್ನು ಮೊದಲಿಗೆ ಸಿದ್ದರಾಮಯ್ಯ ಹಾಗೂ ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ್ರದರ್ಶಿಸಿ, ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘3.90 ಲಕ್ಷ ಹೆಕ್ಟೇರ್ ಗುರಿಯಲ್ಲಿ 3.80 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಮುಂದಿನ ದಿನಗಳಲ್ಲಿ ನಿರೀಕ್ಷಿತ ಮಳೆ ಆಗದಿದ್ದರೆ ರಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಅದಕ್ಕೆ ಅವಕಾಶವಾಗದಂತೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಭತ್ತದ ಬೆಳೆಗೆ ತೊಂದರೆ ಇಲ್ಲ. ಕೃತ್ತಿಕಾ ಮತ್ತು ರೋಹಿಣಿ ಮಳೆಯಿಂದ ಮೇ ತಿಂಗಳಲ್ಲಿ 255 ಹೆಕ್ಟೇರ್ ಬೆಳೆ ನಷ್ಟವಾಗಿದೆ. ತಂಬಾಕು ಸೇರಿದಂತೆ ಬೆಳೆ ನಷ್ಟಕ್ಕೆ ಪರಿಹಾರ ನೀಡಲಾಗಿದೆ. ಹೋದ ವರ್ಷ 95ಸಾವಿರ ಹೆಕ್ಟೇರ್ ಬೆಳೆ ಹಾನಿಗೆ ₹ 63 ಕೋಟಿ ಪರಿಹಾರ ನೀಡಿದ್ದೇವೆ’ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.
ಆಗ ‘ಪ್ರಜಾವಾಣಿ’ ವರದಿ ತೋರಿಸಿದ ಸಿಎಂ, ‘ರೈತರ ಸಾವು ಮತ್ತು ಬೆಳೆ ಹಾನಿ ಕುರಿತು ಬಂದಿರುವ ವರದಿ ನಿರ್ಲಕ್ಷಿಸಬೇಡಿ. ಸತ್ಯಾಸತ್ಯತೆ ಪರಿಶೀಲಿಸಿ ಪರಿಹಾರ ನೀಡಬೇಕು’ ಎಂದು ಸೂಚಿಸಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಮತ್ತು ವಿಧಾನಪರಿಷತ್ ಡಾ.ಯತೀಂದ್ರ ಸಿದ್ದರಾಮಯ್ಯ ದನಿಗೂಡಿಸಿದರು.
‘ಸಾಲದಿಂದ 31 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮಿತಿ ಮುಂದೆ ಮಂಡಿಸಿದ ಪ್ರಕರಣ 29, ತಿರಸ್ಕೃತ 8 ಎಫ್ಎಸ್ಎಲ್ ವರದಿ ಬರುವುದು 2 ಪ್ರಕರಣಗಳಲ್ಲಿ ಬಾಕಿ ಇದೆ. ಉಳಿದ ಎಲ್ಲದಕ್ಕೂ ಪರಿಹಾರ ನೀಡಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ತಿರಸ್ಕೃತವಾದ ಪ್ರಕರಣಗಳ ಕುರಿತು ಸಿಎಂ ಹೆಚ್ಚಿನ ವಿವರಣೆ ಕೇಳಿದರು. ಉತ್ತರಿಸಿದ ಅಧಿಕಾರಿಗಳು, ‘ಕೆಲವರಿಗೆ ಜಮೀನು ಇರಲಿಲ್ಲ. ಒಬ್ಬರು ತಾಯಿ ಹೆಸರಲ್ಲಿ ಸಾಲ ಪಡೆದು ನಾಲ್ಕು ದಿನದಲ್ಲಿ ಪಿರಿಯಾಪಟ್ಟಣದಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಸಾಲ ವಸೂಲಾತಿ ಬಗ್ಗೆ ಒತ್ತಡವೂ ಇರಲಿಲ್ಲ. ಹೀಗಾಗಿ ಈ ಪ್ರಕರಣವನ್ನು ತಿರಸ್ಕರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.
‘ಆ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ಪರಿಹಾರ ಕೊಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸೂಚಿಸಿದರು.
‘ಕೆಳ ಹಂತದ ಅಧಿಕಾರಿಗಳು ಡೈರಿ ಬರೆಯುವುದನ್ನು, ಜಮೀನುಗಳಿಗೆ ಭೇಟಿ ನೀಡುವುದನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಕೆಳ ಹಂತದ ಅಧಿಕಾರಿಗಳು ನೀಡುವ ವರದಿ ಆಧರಿಸಿ ಅಗತ್ಯವಿರುವ ಕೃಷಿ ಭೂಮಿಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ನಿರ್ದೇಶನ ನೀಡಿದರು.
‘ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಇಲಾಖೆ ಅಧಿಕಾರಿಗಳು ಜನಸಂಪರ್ಕ ನಡೆಸುತ್ತಲೇ ಇರಬೇಕು. ನೀವು ಜನರ ಮಧ್ಯೆ ಇದ್ದು ಕೆಲಸ ಮಾಡಲೇಬೇಕು. ಆಗ ಮಾತ್ರ ಪರಿಣಾಮಕಾರಿ ಕೆಲಸ ಸಾಧ್ಯವಾಗುತ್ತದೆ. ನೀವು ಹೇಳಿದ್ದನ್ನು ಕೇಳಿಕೊಂಡು ನಾವು ಹೋಗುವುದಿಲ್ಲ’ ಎಂದರು.
‘ಕೃಷಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರ ಜಮೀನುಗಳಲ್ಲಿ ಪರಿಶೀಲನೆ ನಡೆಸಬೇಕು. ರೈತರ ಸಭೆಗಳನ್ನು ನಡೆಸಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.