
ಹಂಪಾಪುರ: ‘ದೆಗ್ಗಲ್‌ಹುಂಡಿ-ಕೋಹಳ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಅಸಮಪರ್ಕವಾಗಿದ್ದು, ಶನಿವಾರ ನಡೆದ ಚುನಾವಣೆಯಲ್ಲಿ ತಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ ಕೋಹಳ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
‘ಸಹಕಾರ ಸಂಘಕ್ಕೆ 5 ವರ್ಷದ ಅವಧಿಗೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಪ್ರಕ್ರಿಯೆಯಲ್ಲಿ ಕೋಹಳ ಗ್ರಾಮಸ್ಥರಿಗೆ ಭಾರಿ ಮೋಸವಾಗಿದೆ. ಸಂಘದ ಕಾರ್ಯದರ್ಶಿಗಳು ಷೇರುದಾರರೊಂದಿಗೆ ಸರಿಯಾಗಿ ಸ್ಪಂದಿಸಿಲ್ಲ. ಅಭ್ಯರ್ಥಿಗಳಿಗೆ ಚುನಾವಣೆ ಚಿಹ್ನೆ ನೀಡುವಾಗಲೂ ಗೊಂದಲ ಉಂಟಾಗಿದೆ. ಚುನಾವಣಾಧಿಕಾರಿ ಮನಬಂದಂತೆ ಚಿಹ್ನೆ ನೀಡಿದ್ದಾರೆ’ ಎಂದು ಕೋಹಳ ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದ ಮುಂಭಾಗದಲ್ಲಿ ಸೇರಿದ ಗ್ರಾಮಸ್ಥರು ದೂರಿದರು.
‘ಈಗಾಗಲೇ ಕಾರ್ಯದರ್ಶಿಯಾಗಿ ಇರುವವರ ಕುಟುಂಬದಲ್ಲೇ ಮತ್ತೊಬ್ಬರಿಗೆ ಸಂಘದ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಒತ್ತಾಯ ಕೇಳಿ ಬಂದಾಗ ತಿರಸ್ಕರಿಸಿದ್ದೆವು. ಆದರೆ, ದೆಗ್ಗಲ್‌ಹುಂಡಿ ಗ್ರಾಮಸ್ಥರು ಇದಕ್ಕೆ ಒಪ್ಪಲಿಲ್ಲ. ಇದರಿಂದ ಗೊಂದಲದಲ್ಲೇ ಕೂಟ ಅಂತ್ಯವಾಯಿತು. ಒಂದೇ ಮನೆಯ ಇಬ್ಬರು ಸದಸ್ಯರಿಗೆ ಅಧಿಕಾರ ನೀಡಿದರೆ ಉಳಿದವರ ಪಾಡೇನು? ಒಂದೇ ಮನೆಯ ಇಬ್ಬರಿಗೆ ಅಧಿಕಾರ ನೀಡುವುದನ್ನು ತಪ್ಪಿಸಬೇಕು’ ಎಂದು ಪ್ರತಿಭಟನ ನಿರತ ಗ್ರಾಮಸ್ಥರು ಆಗ್ರಹಿಸಿದರು.
ಚುನಾವಣೆಯಲ್ಲಿ ಕೋಹಳ ಗ್ರಾಮಸ್ಥರಿಗೆ ಅನ್ಯಾಯವಾಗಿದ್ದು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಇಲ್ಲಿ ಹೆಚ್ಚು ಹಾಲು ಉತ್ಪಾದಕರಿದ್ದಾರೆ. ಗ್ರಾಮದಲ್ಲೇ ಡೇರಿ ನಿರ್ಮಾಣವಾದರೆ ಮತ್ತಷ್ಟು ಮಂದಿ ಹಾಲು ಉತ್ಪಾದನೆಗೆ ಮುಂದಾಗಲಿದ್ದಾರೆ. ಹೀಗಾಗಿ ಮೈಮುಲ್ ಅಧ್ಯಕ್ಷರಾದ ಕೆ.ಈರೇಗೌಡ ಅವರು ಕೋಹಳ ಗ್ರಾಮಕ್ಕೆ ಪ್ರತ್ಯೇಕವಾಗಿ ನೂತನ ಡೈರಿ ನಿರ್ಮಾಣಮಾಡಬೇಕು’ ಎಂದುದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ರಾಜಣ್ಣ, ಡೇರಿ ಅಧ್ಯಕ್ಷ ದೇವರಾಜಪ್ಪ, ಗ್ರಾಮಸ್ಥರಾದ ಶಂಭುಲಿಂಗು, ಬಸವಯ್ಯ, ಮಹದೇವಸ್ವಾಮಿ, ನಿಂಗಪ್ಪ, ಕೆ.ಪಿ. ಬಸವಣ್ಣ, ಮಹೇಶ್, ಸೋಮಣ್ಣ, ಮಂಜು, ರಂಗಸ್ವಾಮಿ, ನಾಗೇಂದ್ರ, ಸ್ವಾಮಿ, ಜವರಯ್ಯ, ಮಹದೇವಯ್ಯ, ಸಿದ್ದರಾಜು, ಮಹದೇವ, ಮಲ್ಲಯ್ಯ, ದೇವಮ್ಮಣಿ, ಮಂಚಮ್ಮ, ಗೌರಮ್ಮ, ಭಾಗ್ಯಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.