ADVERTISEMENT

ನೆರೆಪೀಡಿತರಿಗೆ ಕಲಾವಿದರು ಸಹಕರಿಸಲಿ: ‘ಮುಖ್ಯಮಂತ್ರಿ’ ಚಂದ್ರು ಮನವಿ

ಕಾವೇರಿರತ್ನ ಪ್ರಶಸ್ತಿ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 19:23 IST
Last Updated 21 ಅಕ್ಟೋಬರ್ 2018, 19:23 IST
ಪಿರಿಯಾಪಟ್ಟಣದ ಕೊಪ್ಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಮುಖ್ಯಮಂತ್ರಿ’ ಚಂದ್ರು ದಂಪತಿಯನ್ನು ಸನ್ಮಾನಿಸಲಾಯಿತು
ಪಿರಿಯಾಪಟ್ಟಣದ ಕೊಪ್ಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಮುಖ್ಯಮಂತ್ರಿ’ ಚಂದ್ರು ದಂಪತಿಯನ್ನು ಸನ್ಮಾನಿಸಲಾಯಿತು   

ಪಿರಿಯಾಪಟ್ಟಣ: ಕೊಡಗಿನ ಪ್ರವಾಹ‍‍ಪೀಡಿತ ಸಂತ್ರಸ್ತರಿಗೆ ಕಲಾವಿದರು ನೆರವು ನೀಡಬೇಕು. ಆ ಮೂಲಕ ಕೊಡಗಿನ ಗತವೈಭವವನ್ನು ಮರುಕಳಿಸುವಂತೆ ಮಾಡಬೇಕು ಎಂದು ನಟ ‘ಮುಖ್ಯಮಂತ್ರಿ’ ಚಂದ್ರು ಸಲಹೆ ನೀಡಿದರು.

ತಾಲ್ಲೂಕಿನ ಕೊಪ್ಪದ ಕಾವೇರಿ ಪ್ರತಿಮೆ ಬಳಿ ‘ಭಾರವಿ ಕಾವೇರಿ ಕನ್ನಡ ಸಂಘ’ದ ವತಿಯಿಂದ ಏರ್ಪಡಿಸಿದ್ದ ‘6ನೇ ವರ್ಷದ ಕಾವೇರಿ ತೀರ್ಥ ವಿತರಣೆ, ಅನ್ನ ಸಂತರ್ಪಣೆ’ ಕಾರ್ಯಕ್ರಮದಲ್ಲಿ ‘ಕಾವೇರಿರತ್ನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕನ್ನಡ ನಾಡು, ನುಡಿ, ಜಲದ ವಿಚಾರದಲ್ಲಿ ಕನ್ನಡಿಗರೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಪ್ರತ್ಯೇಕ ರಾಜ್ಯ ಕೂಗಿಗೆ ನನ್ನ ಬೆಂಬಲವಿಲ್ಲ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಬಗೆಹರಿಸಬೇಕು ಎಂದು ಆಗ್ರಹಿಸಿದರು.

‘ಕೊಡಗಿನಲ್ಲಿ ‘ಮುಖ್ಯಮಂತ್ರಿ’ ನಾಟಕವನ್ನು ಪ್ರದರ್ಶಿಸಿ ಅದರಿಂದ ಬಂದ ಹಣವನ್ನು ನೆರೆ ಸಂತ್ರಸ್ತರ ನಿಧಿಗೆ ಕೊಡುತ್ತೇನೆ’ ಎಂದು ಹೇಳಿದರು.

ಮಾಜಿ ಸೈನಿಕ ಪ್ರಸನ್ನ ಕುಮಾರ್‌ ಹಾಗೂ ಹ್ಯಾಂಡ್‌ ಬಾಲ್‌ ಕ್ರೀಡೆಯ ಜ್ಯೂನಿಯರ್‌ ವಿಭಾಗದಲ್ಲಿ ಭಾರತ ತಂಡ ಪ್ರತಿನಿಧಿಸುತ್ತಿರುವ ಹರ್ಷಿತ್ ಅವರನ್ನು ಸನ್ಮಾನಿಸಲಾಯಿತು.

ಸಾವಿರಾರು ಮಂದಿಗೆ ಕಾವೇರಿ ತೀರ್ಥ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್, ಎಸ್ಎಲ್ಎನ್‌ ಸಂಸ್ಥೆಯ ಮಾಲೀಕ ಸಾತಪ್ಪನ್, ಸಮಾಜ ಸೇವಕ ಸಾಯಿಕುಮಾರ್, ಭಾರವಿ ಕನ್ನಡ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಮುಖಂಡರಾದ ಸೋಮಶೇಖರ್, ಜಬೀವುಲ್ಲಾ, ಚಂದ್ರು, ಪ್ರವೀಣ್, ಚಂದ್ರನ್, ರಾಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.