ADVERTISEMENT

ಅಪಹರಣಗೊಂಡಿದ್ದ ತಹಶೀಲ್ದಾರ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2018, 16:07 IST
Last Updated 3 ಆಗಸ್ಟ್ 2018, 16:07 IST
ತಹಶೀಲ್ದಾರ್ ಮಹೇಶ್‌ ಚಂದ್ರ ಅವರು ಅಪಹರಣವಾದ ಸ್ಥಳದಲ್ಲಿ ಕಾರು ಹಾಗೂ ಶೂ ಪತ್ತೆಯಾಗಿದೆ.
ತಹಶೀಲ್ದಾರ್ ಮಹೇಶ್‌ ಚಂದ್ರ ಅವರು ಅಪಹರಣವಾದ ಸ್ಥಳದಲ್ಲಿ ಕಾರು ಹಾಗೂ ಶೂ ಪತ್ತೆಯಾಗಿದೆ.   

ಮೈಸೂರು/ಮಂಡ್ಯ: ಅಪಹರಣಕ್ಕೆ ಒಳಗಾಗಿದ್ದ ಕೆ.ಆರ್‌.ಪೇಟೆ ತಹಶೀಲ್ದಾರ್‌ ಕೆ.ಮಹೇಶ್‌ಚಂದ್ರ ನಾಟಕೀಯ ಬೆಳವಣಿಗೆಯೊಂದರಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದ್ದಾರೆ.

ಅವರು ಸಂಚರಿಸುತ್ತಿದ್ದ ಮಾರುತಿ ಓಮ್ನಿ, ಶೂ ಹಾಗೂ ಶರ್ಟಿನ ಗುಂಡಿಗಳು ಕೆ.ಆರ್‌.ನಗರ ತಾಲ್ಲೂಕು ಸಾಲಿಗ್ರಾಮ ಸಮೀಪದ ಚಿಕ್ಕವಡ್ಡರಗುಡಿ ಗ್ರಾಮದ ಬಳಿ ಪತ್ತೆಯಾಗಿದ್ದವು. ಮೊಬೈಲ್ ಗುರುವಾರ ರಾತ್ರಿಯಿಂದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬೆಳಿಗ್ಗೆ ವಾಹನವನ್ನು ಗಮನಿಸಿದ ಗ್ರಾಮಸ್ಥರು, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ಸಂಜೆ 5.30ರಲ್ಲಿ ಕೆ.ಆರ್‌.ಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಗೆ ಹಾಜರಾದ ಮಹೇಶ್ಚಂದ್ರ, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅಪಹರಣಕ್ಕೊಳಗಾಗಿದ್ದ ಚಿಕ್ಕವಡ್ಡರಗುಡಿಗೆ ಕರೆದೊಯ್ದಿದ್ದಾರೆ.

ADVERTISEMENT

‘ಗುರುವಾರ ರಾತ್ರಿ 10.30ರ ಸಮಯದಲ್ಲಿ ಐವರು ಮುಸುಕುದಾರಿಗಳು ಕಾರಿನಲ್ಲಿ ಅಪಹರಿಸಿದರು. ನನಗೂ ಮುಸುಕು ಹಾಕಿ ಕರೆದೊಯ್ದರು. ರಾತ್ರಿ ಹಾಗೂ ಶುಕ್ರವಾರ ಮಧ್ಯಾಹ್ನದವರೆಗೂ ಗುಪ್ತ ಸ್ಥಳದಲ್ಲಿರಿಸಿದ್ದರು. ನಂತರ ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೆಕೆರೆ ಬಳಿ ಬಿಟ್ಟು ಪರಾರಿಯಾದರು. ನಂತರ ಬಸ್‌ ಹತ್ತಿ ಠಾಣೆಗೆ ಬಂದಿದ್ದೇನೆ’ ಎಂದು ಮಹೇಶ್‌ಚಂದ್ರ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಒಂದು ವಾರದ ಹಿಂದಷ್ಟೇ ಕೆ.ಆರ್.ನಗರದಿಂದ ಕೆ.ಆರ್.ಪೇಟೆಗೆ ವರ್ಗಾವಣೆಗೊಂಡಿದ್ದರು. ಕುಟುಂಬ ಸ್ಥಳಾಂತರಗೊಂಡಿರಲಿಲ್ಲ. ಗುರುವಾರ ಸಂಜೆ 7.30ಕ್ಕೆ ಉಪವಿಭಾಗಾಧಿಕಾರಿ ಜತೆ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ರಾತ್ರಿ 9 ಗಂಟೆವರೆಗೂ ತಾಲ್ಲೂಕು ಕಚೇರಿಯಲ್ಲಿ ಬಾಕಿ ಉಳಿದಿದ್ದ ಕೆಲಸ ಮುಗಿಸಿ ಕೆ.ಆರ್‌.ನಗರಕ್ಕೆ ಹೊರಟಿದ್ದರು. ನಂತರ ಅವರ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ವಿಡಿಯೊ ವೈರಲ್: ಮಹೇಶ್‌ಚಂದ್ರ ನಾಪತ್ತೆ ಪ್ರಕರಣದ ಬೆನ್ನಲ್ಲೆ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅವರಿಗೆ ಅತೀವ ವಿಧೇಯತೆ ತೋರಿಸಿರುವ ವಿಡಿಯೊವೊಂದು ವೈರಲ್ ಆಗಿದೆ. ಈಚೆಗೆ ಕಚೇರಿಗೆ ಬಂದ ಶಾಸಕರ ಕಾರಿನ ಬಾಗಿಲನ್ನು ತಾವೇ ತೆಗೆದು ವಂದಿಸಿ, ಬರಮಾಡಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.