ADVERTISEMENT

ಟಿ.ಎಂ.ಕೃಷ್ಣ ಅವರ ಸಂಗೀತ ಇಂದು ಮತ್ತು ನಾಳೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 19:54 IST
Last Updated 21 ನವೆಂಬರ್ 2018, 19:54 IST
ಟಿ.ಎಂ.ಕೃಷ್ಣ
ಟಿ.ಎಂ.ಕೃಷ್ಣ   

ಮೈಸೂರು: ಮ್ಯಾಗ್ಸೆಸೇ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಟಿ.ಎಂ.ಕೃಷ್ಣ ಅವರ ಸಂಗೀತ ಕಾರ್ಯಕ್ರಮವು ನಗರದಲ್ಲಿ ನ. 22 ಮತ್ತು 23ರಂದು ನಡೆಯಲಿದೆ.

ಗಾನಭಾರತೀಯಲ್ಲಿ 22ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ನ. 23ರಂದು ಸಂಜೆ 6 ಗಂಟೆಗೆ ಇವರಿಂದ ‘ಬೆಳದಿಂಗಳ ಸಂಗೀತ’ವನ್ನು ಏರ್ಪಡಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗಾನಭಾರತೀಯ ಅಧ್ಯಕ್ಷ ಡಾ.ಸಿ.ಜಿ.ನರಸಿಂಹನ್, ‘ಕೃಷ್ಣ ಅವರ ಸಂಗೀತ ಕಾರ್ಯಕ್ರಮಕ್ಕೆ ಯಾವುದೇ ಭೀತಿ ಎದುರಾಗಿಲ್ಲ. ಕಾರ್ಯಕ್ರಮ ಯಶಸ್ವಿಯಾಗಲಿದೆ’ ಎಂದು ಹೇಳಿದರು.

ADVERTISEMENT

ಈಚೆಗಷ್ಟೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನವದೆಹಲಿಯಲ್ಲಿ ನಡೆಯಬೇಕಿದ್ದ ಇವರ ಕಾರ್ಯಕ್ರಮವನ್ನು ತುರ್ತು ಕಾರಣ ನೀಡಿ ಕಡೆ ಗಳಿಗೆಯಲ್ಲಿ ರದ್ದುಪಡಿಸಿತ್ತು. ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕೃಷ್ಣ ಅವರನ್ನು ಕಾರ್ಯಕ್ರಮಕ್ಕೆ ಕರೆಸಬಾರದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿತ್ತು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಆದರೆ, ಇದಕ್ಕೆ ಪ್ರತಿಯಾಗಿ ದೆಹಲಿ ಸರ್ಕಾರ ಇವರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತ್ತು.

ಕೃಷ್ಣ ಅವರ ಪರಿಚಯ:

ವಿದ್ವಾನ್ ಟಿ.ಎಂ.ಕೃಷ್ಣ ಕೇವಲ ಶ್ರೇಷ್ಠಮಟ್ಟದ ಸಂಗೀತಗಾರರಷ್ಟೇ ಅಲ್ಲ, ಸಂಗೀತ ಕುರಿತು ಸ್ವಂತ ನಿಲುವನ್ನು ಹೊಂದಿರುವ ಕಲಾವಿದರು. ಇವರು ವಿದ್ವಾನ್ ಬಿ.ಸೀತಾರಾಮಶರ್ಮ ಅವರಲ್ಲಿ ಸಂಗೀತ ಶಿಕ್ಷಣ ಪ್ರಾರಂಭಿಸಿ, ರಾಗ-ತಾನ-ಪಲ್ಲವಿ ಕುರಿತು ಚೆಂಗಲ್‍ಪೇಟ್ ರಂಗನಾಥನ್ ಅವರ ಬಳಿ ವಿಶೇಷ ತರಬೇತಿ ಪಡೆದರು. ನಂತರ, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಲ್ಲಿ ಉನ್ನತ ಶಿಕ್ಷಣ ಪಡೆದರು. 12ನೇ ವರ್ಷದಲ್ಲಿ ಮ್ಯೂಸಿಕ್ ಅಕಾಡೆಮಿ ಸಂಘಟಿಸಿದ ಇವರು ‘ಸ್ಪಿರಿಟ್ ಆಫ್ ಯೂತ್’ ಸರಣಿಯಲ್ಲಿ ಕಾರ್ಯಕ್ರಮ ನೀಡಿದರು. ಹಾವರ್ಡ್ ವಿಶ್ವವಿದ್ಯಾನಿಲಯವೂ ಸೇರಿದಂತೆ ವಿದೇಶಗಳಲ್ಲಿ ಇವರು ಕರ್ನಾಟಕ ಸಂಗೀತವನ್ನು ಪ್ರಸ್ತುತಪಡಿಸಿದ್ದಾರೆ.

ಇವರ ಕೃತಿ ‘ಸದರನ್ ಮ್ಯೂಸಿಕ್’ ಸಂಗೀತ ಕ್ಷೇತ್ರದಲ್ಲಿ ಒಂದು ಅಲೆಯನ್ನೇ ಸೃಷ್ಟಿಸಿದೆ. ಇವರ ಇತ್ತೀಚಿನ ಪುಸ್ತಕ ‘ರಿಶೇಪಿಂಗ್ ಮ್ಯೂಸಿಕ್’. ಸಂಗೀತದಲ್ಲೂ ನಿರಂತರ ಹುಡುಕಾಟ ನಡೆಸುತ್ತಿರುವ ಇವರು ತಮ್ಮ ಈ ಮಾರ್ಗದಲ್ಲಿ ತೊಡಕಾಗಬಹುದಾದ ಎಲ್ಲಾ ರೂಢಿಗತ ಆಚರಣೆಗಳನ್ನೂ ಪ್ರಶ್ನಿಸುತ್ತಾ ಸಾಗಿದ್ದಾರೆ. ಸಂಗೀತದಲ್ಲಿ ಕಾಣುತ್ತಿರುವ ಅಸಮಾನತೆಯ ಬಗ್ಗೆ ಮಾತನಾಡುತ್ತಲೇ ಸಂಗೀತವನ್ನು ಜನರ ನಡುವೆ ತೆಗೆದುಕೊಂಡು ಹೋಗಲು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇದನ್ನು ಗುರುತಿಸಿ ಇವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೇ ಪ್ರಶಸ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.