ADVERTISEMENT

ಕುದೇರು ಮಠ: ಗುರುಮಲ್ಲೇಶ್ವರ ಆರಾಧನೆ

ಸಿದ್ಧಗಂಗಾ ಮಠದ ಕಿರಿಯಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಭಾಗಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 12:42 IST
Last Updated 18 ಜೂನ್ 2025, 12:42 IST
ಮೈಸೂರಿನ ಕುದೇರು ಮಠದಲ್ಲಿ ಮಂಗಳವಾರ ನಡೆದ ಗುರುಮಲ್ಲೇಶ್ವರರ 126ನೇ ಗಣಾರಾಧನೆಯಲ್ಲಿ ಪಾಲ್ಗೊಂಡಿದ್ದ ಗುರುಶಾಂತ ಸ್ವಾಮೀಜಿ, ಶಿವಸಿದ್ದೇಶ್ವರ ಸ್ವಾಮೀಜಿ, ಇಮ್ಮಡಿ ಗುರುಲಿಂಗ ಸ್ವಾಮೀಜಿ, ಸಿದ್ದಮಲ್ಲ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಇಮ್ಮುಡಿ ಬಸಪ್ಪ ಸ್ವಾಮೀಜಿ ಹಾಗೂ ಭಕ್ತರು
ಮೈಸೂರಿನ ಕುದೇರು ಮಠದಲ್ಲಿ ಮಂಗಳವಾರ ನಡೆದ ಗುರುಮಲ್ಲೇಶ್ವರರ 126ನೇ ಗಣಾರಾಧನೆಯಲ್ಲಿ ಪಾಲ್ಗೊಂಡಿದ್ದ ಗುರುಶಾಂತ ಸ್ವಾಮೀಜಿ, ಶಿವಸಿದ್ದೇಶ್ವರ ಸ್ವಾಮೀಜಿ, ಇಮ್ಮಡಿ ಗುರುಲಿಂಗ ಸ್ವಾಮೀಜಿ, ಸಿದ್ದಮಲ್ಲ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಇಮ್ಮುಡಿ ಬಸಪ್ಪ ಸ್ವಾಮೀಜಿ ಹಾಗೂ ಭಕ್ತರು   

ಮೈಸೂರು: ಅಗ್ರಹಾರದ ಕುದೇರು ಮಠದಲ್ಲಿ ಮಂಗಳವಾರ ಗುರುಮಲ್ಲೇಶ್ವರರ 126ನೇ ಮತ್ತು ಗುರುಲಿಂಗ ಸ್ವಾಮೀಜಿ ಅವರ 34ನೇ ಗಣಾರಾಧನೆ ನಡೆಯಿತು. 

ಸೋಮವಾರ ಸಂಜೆಯಿಂದಲೇ ಬಸವೇಶ್ವರ ಹಾಗೂ ಗುರುಮಲ್ಲೇಶ್ವರ ಮೂರ್ತಿಯ ಮೆರವಣಿಗೆ, ರುದ್ರಾಭಿಷೇಕ,  ನಾಟಕ, ಅನ್ನ ದಾಸೋಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಿಂದ ಮಠದ ಭಕ್ತರು ಬಂದಿದ್ದರು. 

ಸಿದ್ಧಗಂಗಾ ಮಠದ ಕಿರಿಯಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ಮನಸ್ಸಿಗೆ ಎರಡು ಮುಖಗಳಿವೆ. ಗುರು ವಿಚಾರದ ಬಗ್ಗೆ ತಿಳಿದರೆ ಮನಸ್ಸು ಅರಳುತ್ತದೆ. ಕೆಟ್ಟ ವಿಚಾರದ ತಿಳಿಯಲು ಹೊರಟರೆ ಅದೇ ಮನಸ್ಸು ಕೆರಳುತ್ತದೆ. ನಾವು ಎಂದಿಗೂ ದಾರ್ಶನಿಕರು, ಸಿದ್ಧರು, ಮಹಾತ್ಮರನ್ನು ನೆನೆಯಬೇಕು. ಅವರ ಮಾತು ಆಲಿಸಬೇಕು’ ಎಂದರು. 

ADVERTISEMENT

‘ದೇಶವು ವಿಶ್ವಕ್ಕೆ ಅಧ್ಯಾತ್ಮದ ಕೂಡುಗೆ ನೀಡಿದೆ. ಸಂತರು, ಶರಣರು, ವಚನಕಾರರು ಅದರ ಪ್ರವರ್ತಕರಾಗಿದ್ದಾರೆ. ಭಾರತದ ಹಿರಿಯ ಮಗಳು ಕರ್ನಾಟಕ. ಇಲ್ಲಿ ಬಸವಣ್ಣ, ಗುರುಮಲ್ಲೇಶ್ವರರು ಸೇರಿದಂತೆ ಸಾಕಷ್ಟು ದಾರ್ಶನಿಕರು ಜನಿಸಿ ನಮ್ಮ ಕನ್ನಡ ನೆಲವನ್ನು ಪವಿತ್ರಗೊಳಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು’ ಎಂದರು. 

ಕುದೇರು ಮಠದ ಗುರುಶಾಂತ ಮಹಾಸ್ವಾಮಿ, ಕಿರಿಯಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಸಿದ್ದಮಲ್ಲ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಇಮ್ಮುಡಿ ಬಸಪ್ಪ ಸ್ವಾಮೀಜಿ ಪಾಲ್ಗೊಂಡಿದ್ದರು. 

ಮುಂಜಾನೆಯಿಂದಲೇ ಪೂಜೆ: 
ಬೆಳಿಗ್ಗೆ 4 ಗಂಟೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭ ಗೊಂಡವು. ಗುರುಮಲ್ಲೇಶ್ವರರು ಮತ್ತು ಗುರುಲಿಂಗ ಮಹಾಸ್ವಾಮಿಗಳ ಗದ್ದುಗೆಗಳಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ನೆರವೇರಿತು. ಮಧ್ಯಾಹ್ನ ಅನ್ನ ದಾಸೋಹ ನಡೆಯಿತು. 

ಸಂಜೆ ಗುರುಮಲ್ಲೇಶ್ವರರ ಮೂರ್ತಿಯನ್ನು ನಗರದ ಅಗ್ರಹಾರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ರಾತ್ರಿ ದಕ್ಷಯಜ್ಞ ನಾಟಕವನ್ನು ಭಕ್ತರು ನೋಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.