
ಮೈಸೂರು: ಅಂಗನವಾಡಿ ಕೇಂದ್ರಗಳು ಹಾಗೂ ಸರ್ಕಾರಿ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟಕ್ಕೆ ಕೋಳಿ ಮೊಟ್ಟೆ ವಿತರಣೆ, ಹಾಸ್ಟೆಲ್, ರೆಸ್ಟೋರೆಂಟ್ ಮೊದಲಾದವುಗಳಿಗೆ ಕೋಳಿಮಾಂಸ ಪೂರೈಕೆಯ ‘ಶಕ್ತಿ’ ತುಂಬುವುದಕ್ಕಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಆರ್ಥಿಕ ಬೆಂಬಲ ಕೊಡಲಾಗುತ್ತಿದೆ.
ಇದಕ್ಕಾಗಿ ರಾಜ್ಯ ಸರ್ಕಾರದಿಂದ ‘ಕುಕ್ಕುಟ ಸಂಜೀವಿನಿ’ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಉತ್ತೇಜನ ನೀಡುವ ಯೋಜನೆಯನ್ನು ಜಿಲ್ಲಾ ಪಂಚಾಯಿತಿಯಿಂದ ಕೈಗೊಳ್ಳಲಾಗುತ್ತಿದೆ.
ಬಜೆಟ್‌ನಲ್ಲಿ ಘೋಷಿಸಿದಂತೆ
ಯೋಜನೆಯ ಬಗ್ಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಪ್ರತಿ ತಾಲ್ಲೂಕಿನಿಂದ ಕನಿಷ್ಠ 5 ಸ್ವ-ಸಹಾಯ ಗುಂಪು, ಉತ್ಪಾದಕರ ಗುಂಪು ಅಥವಾ ಜಂಟಿ ಬಾಧ್ಯತಾ ಗುಂಪುಗಳ ರಚನೆ ಗುರಿ ಹೊಂದಲಾಗಿದೆ.
ಪ್ರತಿ ಗುಂಪಿನಲ್ಲಿ ಐವರು ಸಮಾನ ಮನಸ್ಕ ಆಸಕ್ತಿಯುಳ್ಳ ಡೇ-ಎನ್‌ಆರ್‌ಎಲ್‌ಎಂ ವಿಧೇಯಕ ಸದಸ್ಯರಿರಬೇಕು. 500 ಅಥವಾ ಸಾವಿರ ಕೋಳಿ ಸಾಕಾಣಿಕೆ ಶೆಡ್ ನಿರ್ಮಾಣಕ್ಕೆ ಸರ್ಕಾರಿ ಅಥವಾ ಸಮುದಾಯದ ಸ್ಥಳ ಲಭ್ಯವಿರಬೇಕು.
500 ಸಾಮರ್ಥ್ಯದ ಕೋಳಿ ಸಾಕಾಣಿಕೆ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಿಂದ ₹ 4.50 ಲಕ್ಷ ಮತ್ತು 1000 ಕೋಳಿ ಸಾಕಾಣಿಕೆ ಶೆಡ್‌ಗೆ ₹ 7.50 ಲಕ್ಷ ಅನುದಾನಕ್ಕೆ ಅವಕಾಶವಿದೆ.
ಸ್ವ-ಸಹಾಯ ಗುಂಪಿನ ಸದಸ್ಯರ ಒಡೆತನದಲ್ಲಿ ಈಗಾಗಲೇ ನಿರ್ಮಾಣವಾಗಿ ಕಾರ್ಯಾಚರಣೆಯಲ್ಲಿರುವ ಅಥವಾ ಇಲ್ಲದಿರುವ 500 ಅಥವಾ 1000 ಸಾಮರ್ಥ್ಯದ ಕೋಳಿ ಸಾಕಾಣಿಕೆ ಶೆಡ್‌ಗಳು ಲಭ್ಯವಿದ್ದಲ್ಲಿ ಅದನ್ನು ಬಳಸುವುದಕ್ಕೂ ಅವಕಾಶವಿದೆ. ಯೋಜನೆಯನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಅನುಷ್ಠಾನಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ.
ಎನ್‌ಆರ್‌ಎಲ್‌ಎಂನಿಂದ
ಜಿಲ್ಲಾ ಪಂಚಾಯಿತಿಯು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್‌ಆರ್‌ಎಲ್‌ಎಂ)ದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕಾಗಿ 225 ಸ್ವಸಹಾಯ ಸಂಘಗಳನ್ನು ಗುರುತಿಸಲಾಗಿದೆ.
‘ಜೀವನೋಪಾಯ ಚಟುವಟಿಕೆಗೆ ಸರ್ಕಾರ ನೀಡುತ್ತಿರುವ ಬೆಂಬಲದ ಯೋಜನೆ ಇದಾಗಿದೆ. ಸಮುದಾಯ ಆಧರಿತ ಜಾಗದಲ್ಲಿ ಅಥವಾ ಗ್ರಾಮ ಪಂಚಾಯಿತಿ ಮೊದಲಾದವುಗಳಿಗೆ ಸೇರಿದ ಕಟ್ಟಡಗಳಲ್ಲಿ ಶೆಡ್ ಕಟ್ಟಿಕೊಡಲು ಕ್ರಮ ವಹಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಗುಂಪು ಚಟುವಟಿಕೆಗೆ ಸ್ವಸಹಾಯ ಸಂಘದವರಿಗೆ ಸಹಾಯಧನ ದೊರೆಯಲಿದೆ. ಸಮುದಾಯ ಬಂಡವಾಳ ವಂತಿಕೆಯಾಗಿ ₹ 25ಸಾವಿರದಲ್ಲಿ ಕೋಳಿ ಸಾಕಣೆಗೆ ಶೆಡ್ ಕಟ್ಟಿಕೊಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ಕೋಳಿ ಮೊಟ್ಟೆಗಳನ್ನು ಆಯಾ ವೃತ್ತದ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲಿ ಮಾರಬಹುದು. ಇದರಿಂದ ಅಂಗನವಾಡಿಗಳವರು ನಗರಕ್ಕೆ ಹೋಗಿ ತರುವುದು ತಪ್ಪುತ್ತದೆ. ಸ್ವಸಹಾಯ ಸಂಘಕ್ಕೂ ಅನುಕೂಲ ಆಗುತ್ತದೆ. ಇದಕ್ಕಾಗಿ ಒಕ್ಕೂಟದವರು ಎಂಒಯು ಮಾಡಿಕೊಂಡು ಪೂರೈಸಬಹುದು. ಶಾಲೆಗಳಿಗೂ ಮಧ್ಯಾಹ್ನದ ಬಿಸಿಯೂಟಕ್ಕೆ ಒದಗಿಸಬಹುದಾಗಿದೆ. ಜಾಗದ ಲಭ್ಯತೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ವೈಯಕ್ತಿಕವಾಗಿ ಕೋಳಿ ಮರಿ ಸಾಕುತ್ತಿರುವವರು ಮುಂದೆ ಬಂದಿದ್ದಾರೆ. ಘಟಕ ಸ್ಥಾಪನೆಗೆ ಯೋಜಿಸಲಾಗಿದೆ’ ಎಂದು ಹೇಳಿದರು.
ಮಹಿಳಾ ಸಬಲೀಕರಣ ಗ್ರಾಮೀಣ ಜೀವನೋಪಾಯ ಮತ್ತು ಶಾಲಾ ಮಕ್ಕಳಿಗೆ ಉತ್ತಮ ಪೋಷಣೆಗೆ ಬಹಳ ಅವಶ್ಯವಾದ ಯೋಜನೆ ಇದಾಗಿದೆ– ಎಸ್. ಯುಕೇಶ್‌ಕುಮಾರ್, ಸಿಇಒ. ಮೈಸೂರು ಜಿಲ್ಲಾ ಪಂಚಾಯಿತಿ
ಮೈಸೂರು ಜಿಲ್ಲೆಯಲ್ಲಿ ಗುರುತಿಸಿರುವ ಸ್ವಸಹಾಯ ಸಂಘಗಳ ಮಾಹಿತಿ
ತಾಲ್ಲೂಕು; ಗುರಿ; ಸಾಧನೆ
ಎಚ್.ಡಿ.ಕೋಟೆ; 25; 25
ಹುಣಸೂರು; 25; 25
ಕೆ.ಆರ್.ನಗರ; 25; 25
ಮೈಸೂರು; 25; 25
ನಂಜನಗೂಡು; 25; 25
ಪಿರಿಯಾಟ್ಟಣ; 25; 25
ಸಾಲಿಗ್ರಾಮ; 25; 25
ಸರಗೂರು; 25; 25
ತಿ.ನರಸೀಪುರ; 25; 25
ಒಟ್ಟು; 225; 225
(ಮಾಹಿತಿ: ಜಿಲ್ಲಾ ಪಂಚಾಯಿತಿ)
ಯೋಜನೆ ಅನುಷ್ಠಾನ ಹೇಗೆ?
ಕುಕ್ಕುಟೋದ್ಯಮದ ಮೂಲಕ ಆರ್ಥಿಕ ನೆರವು ಪಡೆಯಲು ಬಯಸುವ 5ರಿಂದ 10 ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಗ್ರಾಮೀಣ ಜನವಸತಿ ಪ್ರದೇಶದಿಂದ 1ರಿಂದ 2 ಕಿ.ಮೀ. ಹೊರಗಡೆ ಕೋಳಿ ಸಾಕಾಣಿಕೆಯ ಶೆಡ್ ನಿರ್ಮಾಣ ಮಾಡಿಕೊಡಲಾಗುತ್ತದೆ. ಪಶುಪಾಲನಾ ಇಲಾಖೆಯು ಕೋಳಿ ಮರಿಗಳನ್ನು ನೀಡಿ ಆಯ್ಕೆಯಾದ ಫಲಾನುಭವಿಗಳಿಗೆ 10 ದಿನಗಳು ತರಬೇತಿಯನ್ನೂ ಕೊಡಲಿದೆ. ಕೋಳಿಗಳ ಸಾಕಣೆ ಆಹಾರ ನೀಡುವ ವಿಧಾನದ ಬಗ್ಗೆ ತಿಳಿಸಿಕೊಡಲಿದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.