ADVERTISEMENT

ಕೆಎಸ್ಐಸಿ ಆವರಣದಲ್ಲಿ ಕ್ರೀಡಾಂಗಣ ಬೇಡ: ಕಾರ್ಮಿಕರ‌ ಆಗ್ರಹ

ಕಾರ್ಖಾನೆ ಅಭಿವೃದ್ಧಿಪಡಿಸಿ ಹೆಚ್ಚು ಉದ್ಯೋಗ ದೊರಕಿಸಲು ಕಾರ್ಮಿಕರ‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:28 IST
Last Updated 24 ಜೂನ್ 2025, 15:28 IST
ತಿ.ನರಸೀಪುರ ಪಟ್ಟಣದ ಕೆಎಸ್‌ಐಸಿ ಘಟಕದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾಂಗಣ ಪ್ರಸ್ತಾವನೆಯನ್ನು‌ ಕೈಬಿಡುವಂತೆ ಒತ್ತಾಯಿಸಿ ಕಾರ್ಮಿಕರು ತಹಶೀಲ್ದಾರ್ ಸುರೇಶ್ ಆಚಾರ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು
ತಿ.ನರಸೀಪುರ ಪಟ್ಟಣದ ಕೆಎಸ್‌ಐಸಿ ಘಟಕದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾಂಗಣ ಪ್ರಸ್ತಾವನೆಯನ್ನು‌ ಕೈಬಿಡುವಂತೆ ಒತ್ತಾಯಿಸಿ ಕಾರ್ಮಿಕರು ತಹಶೀಲ್ದಾರ್ ಸುರೇಶ್ ಆಚಾರ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು   

ತಿ.ನರಸೀಪುರ: ಪಟ್ಟಣದ ಕೆಎಸ್‌ಐಸಿ ನೂಲು ತೆಗೆಯುವ ಘಟಕದ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಯು ಕೈ ಬಿಡಬೇಕು ಎಂದು ಒತ್ತಾಯಿಸಿ ಕೆಎಸ್‌ಐಸಿಯ ನೂರಾರು ಕಾರ್ಮಿಕರು ಪಟ್ಟಣದಲ್ಲಿ ಮಂಗಳವಾರ ಮೌನ‌ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕೆಎಸ್‌ಐಸಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕಿನ ಕ್ರೀಡಾಂಗಣ ನಿರ್ಮಿಸುವ ಕುರಿತು ರೇಷ್ಮೆ ಇಲಾಖೆಯಿಂದ ಕ್ರೀಡಾ ಇಲಾಖೆಗೆ ಭೂಮಿ ಹಸ್ತಾಂತರಿಸಲು ಚರ್ಚೆಯಾಗಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ನೌಕರರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕೆಎಸ್‌ಐಸಿ ಕಾರ್ಖಾನೆಯಿಂದ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿದರು.

ಕಾರ್ಮಿಕ ಸಂಘಟನೆ ಮುಖಂಡ ಮಂಜಪ್ಪ ಮಾತನಾಡಿ, ‘ತಾಲ್ಲೂಕು ಕೇಂದ್ರದಲ್ಲಿ ಇದು ಏಕೈಕ ಸರ್ಕಾರಿ ಕಾರ್ಖಾನೆಯಾಗಿದ್ದು, ಸುತ್ತಮುತ್ತಲಿನ ಹಳ್ಳಿಯ 250ಕ್ಕೂ ಹೆಚ್ಚು ಅಹಿಂದ ಸಮಾಜದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಘಟಕದ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸಲು ನಿರ್ಧರಿಸಿರುವುದು ಮುಂದೆ ಕಾರ್ಮಿಕರಿಗೆ ತೊಂದರೆಯಾಗಬಹುದು. ಸಂಸ್ಥೆ ಆವರಣದಲ್ಲಿ ಇನ್ನೂ ಹೆಚ್ಚು ಯಂತ್ರಗಳನ್ನು ಹಾಕಿ ಯೋಜನೆ ವಿಸ್ತರಿಸಿ ಉದ್ಯೋಗ ಅವಕಾಶಗಳನ್ನು ಒದಗಿಸುವ ರೀಲಿಂಗ್ ಘಟಕಗಳು ಮತ್ತು ಬಾಯ್ಲರ್‌ಗಳನ್ನು ಸ್ಥಾಪಿಸುವ ಉದ್ದೇಶವಿದ್ದು, ಇದರಿಂದ ಹೆಚ್ಚುವರಿ 300 ಜನರಿಗೆ ಉದ್ಯೋಗಾವಕಾಶ ದೊರಕಲಿದೆ’ ಎಂದರು.

ADVERTISEMENT

‘ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಯು ಕೈಬಿಟ್ಟು ಕಾರ್ಖಾನೆಯನ್ನು ಮೇಲ್ದರ್ಜೆಗೇರಿಸಿ ತಾಲ್ಲೂಕಿನ ಬಡ ಮಧ್ಯಮ ವರ್ಗದ ನಿರುದ್ಯೋಗಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಕ್ಕೆ ಅನುವು ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಕಾರ್ಮಿಕ ಮುಖಂಡ ಪ್ರದೀಪ್ ಮಾತನಾಡಿ, ‘ನೂರಾರು ಕುಟುಂಬಗಳಿಗೆ ಜೀವನ ಕೊಟ್ಟಿರುವ ಕಾರ್ಖಾನೆಗೆ ಹೆಚ್ಚುವರಿಯಾಗಿ 4 ನೂಲು ತೆಗೆಯುವ ಮಿಷನ್‌ಗಳು ಬರಲಿದ್ದು, ಉತ್ಪಾದನೆ ಹೆಚ್ಚಾಗಿ ಮತ್ತಷ್ಟು ಕಾರ್ಮಿಕರಿಗೆ ಉದ್ಯೋಗ ದೊರಕಲಿದೆ. ಕ್ರೀಡಾಂಗಣಕ್ಕೆ ಬೇರೆ ಜಾಗ ಗುರುತಿಸಿ ಕಾರ್ಖಾನೆ ಉಳಿಸಿಕೊಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಮೆರವಣಿಗೆಯಲ್ಲಿ ಪರಶಿವಮೂರ್ತಿ, ಪುಟ್ಟಣ್ಣ, ಬಸವರಾಜ ಅರಸ್, ಪವನ್ ಗೌಡ, ಸಾಗರ್ ಗೌಡ, ಶಂಕರ, ಪ್ರಸಾದ್, ಸಂದೀಪ್, ಸಿದ್ದರಾಜು, ರಾಜೇಶ್, ಶಾಂತರಾಜು, ಪ್ರಸಾದ್, ಮಹೇಶ್ ಹಾಗೂ ಮಹಿಳಾ ಕಾರ್ಮಿಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.