ADVERTISEMENT

ಲಕ್ಷ್ಮೀ ಹೆಬ್ಬಾಳಕರ-ಸಿ.ಟಿ.ರವಿ ಪ್ರಕರಣ | ಸಭಾಪತಿ ನಿಲುವಿಗೆ ನಾನು ಬದ್ಧ: ಖಾದರ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 13:29 IST
Last Updated 29 ಜನವರಿ 2025, 13:29 IST
   

ಮೈಸೂರು: ‘ವಿಧಾನಪರಿಷತ್ ಸಭಾಪತಿಯವರ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದಕ್ಕೆಂದೇ ಸಭಾಪತಿ ಇದ್ದಾರೆ; ಸಮರ್ಥರಾಗಿರುವ ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ’ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

ಬೆಳಗಾವಿಯಲ್ಲಿ ಈಚೆಗೆ ನಡೆದ ವಿಧಾನಮಂಡಲ ಅಧಿವೇಶನದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಜಿಲ್ಲಾ ಪತ್ರಕರ್ತರ ಸಂಘದಿಂದ ಬುಧವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ‘ಅಧಿವೇಶನದಲ್ಲಿ ವಿಷಯ ಆಧಾರಿತ ಚರ್ಚೆಗಳಿಗೆ ಮಾಧ್ಯಮದವರು ಆದ್ಯತೆ ಕೊಡಬೇಕು. ಯಾವುದೋ ಹೇಳಿಕಗಳನ್ನೇ ಹೈಲೈಟ್ ಮಾಡಿದರೆ, ಶಾಸಕರು ಅಂಥಾದ್ದಕ್ಕೆ ಹೆಚ್ಚು ಗಮನಹರಿಸುತ್ತಾರೆ’ ಎಂದರು.

ADVERTISEMENT

‘ನಾನು ಸ್ಪೀಕರ್ ಆಗಿದ್ದಕ್ಕೆ ಸಂತುಷ್ಟನಾಗಿದ್ದೇನೆ. ಏನೇ ಕೆಲಸ ಸಿಕ್ಕರೂ ಖುಷಿಯಿಂದ ಮಾಡಿದ್ದೇನೆ. ಈಗಲೂ ಹಾಗೆಯೇ ನಿರ್ವಹಿಸುತ್ತಿದ್ದೇನೆ. ನಾನು ಮಂತ್ರಿ ಆಗುತ್ತೇನೆ ಎಂದು ಬಹಳ ಮಂದಿ ಭಾವಿಸಿದ್ದರು. ಆ ಸ್ಥಾನ ಯಾವಾಗ ಬೇಕಾದರೂ ಸಿಗಬಹುದು. ಆದರೆ, ಸ್ಪೀಕರ್ ಹುದ್ದೆ ಸಿಗುವುದು ಕಷ್ಟ. ಶಾಸಕರು ಒಮ್ಮೆಯಾದರೂ ಸಭಾಧ್ಯಕ್ಷರಾಗಬೇಕು’ ಎಂದು ಹೇಳಿದರು.

ವಿರೋಧಪಕ್ಷದವರ ಮಿತ್ರ: ಸಭಾಧ್ಯಕ್ಷರಾದವರು ವಿರೋಧ ಪಕ್ಷದವರ ಮಿತ್ರನಾಗಬೇಕು. ಆ ಸ್ಥಾನದಲ್ಲಿ ಕುಳಿತ ಮೇಲೆ ಯಾವುದೇ ಪಕ್ಷದವರೂ ಆಗಿರಬಾರದು. ವಿರೋಧ ಪಕ್ಷದವರಿಗೆ ಸರ್ಕಾರವಿರುವುದಿಲ್ಲ; ಹೀಗಿರುವಾಗ, ವಿಧಾನಸಭಾಧ್ಯಕ್ಷರೂ ಇಲ್ಲ ಎಂದಾಗ ಗಡಿಬಿಡಿ ಆಗುತ್ತದೆ’ ಎಂದರು.

‘ವಿರೋಧ ಪಕ್ಷದವರ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಧೋರಣೆ ಸರ್ಕಾರಕ್ಕೆ ಇರಬೇಕು. ಕೆಲವು ಸಂದರ್ಭಗಳಲ್ಲಿ ಸ್ಪೀಕರ್‌ ಆಡಳಿತದ ಪಕ್ಷದ ಮಿತ್ರನೂ ಆಗಬೇಕಾಗುತ್ತದೆ. ನಿಗದಿತ ಸಮಯದಲ್ಲಿ ಮಸೂದೆ ಪಾಸ್ ಮಾಡಲು ಈ ಧೋರಣೆ ಬೇಕಾಗುತ್ತದೆ. ಇಲ್ಲದಿದ್ದರೆ ಸರ್ಕಾರದ ಕೆಲಸಗಳಿಗೆ ಅಡ್ಡಿಯಾಗುತ್ತದೆ’ ಎಂದು ತಿಳಿಸಿದರು.

‘ವಿಧಾನಸೌಧಕ್ಕೆ ವಿವಿದ ದಿನಾಚರಣೆಗಳ ಸಂದರ್ಭದಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ದೀಪಾಲಂಕಾರದ ಬದಲಿಗೆ, ಶಾಶ್ವತವಾಗಿ ‌ಮಾಡಲಾಗುವುದು. ಇದರಿಂದ ಪದೇ ಪದೇ ಹಣ ಖರ್ಚು ಮಾಡುವುದು ತಪ್ಪುತ್ತದೆ. ಇ– ಆಡಳಿತದ ಮೂಲಕ ಕಾಗದರಹಿತ ವಿಧಾನಸಭೆ ಮಾಡಲು ಯೋಜಿಸಲಾಗಿದೆ. ಕಾಗದಕ್ಕೆ ಖರ್ಚಾಗುವ ಹಣವನ್ನು ಉಳಿಸಲಾಗುವುದು. ರಾಜ್ಯಕ್ಕೆ ಪ್ರತ್ಯೇಕ ತಂತ್ರಾಂಶ ರೂಪಿಸಲಾಗುವುದು. ದೇಶಕ್ಕಿರುವ ತಂತ್ರಾಂಶ ಹಾಗೂ ರಾಜ್ಯಕ್ಕೆ ಪ್ರತ್ಯೇಕವಾದುದು ಇದ್ದರೆ ಹೇಗಿರುತ್ತದೆ ಎಂಬ ಸಾಧಕ- ಬಾಧಕಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ನಂತರ ಸರ್ಕಾರ ಕ್ರಮ ವಹಿಸಲಿದೆ’ ಎಂದರು.

‘ಹಿಂದೆ ಅಧಿವೇಶನದಲ್ಲಿ ಒಳ್ಳೆಯ ಚರ್ಚೆ ನಡೆಯುತ್ತಿತ್ತು. ಆಗ ಅಂಥವರು ಬರುತ್ತಿದ್ದರು. ಈಗ ಬ್ಯುಸಿನೆಸ್‌ನವರು, ಉದ್ಯಮಿಗಳು ಬರುತ್ತಿದ್ದಾರೆ. ಅವರವರ ಕ್ಷೇತ್ರದ ವಿಷಯದ ಬಗ್ಗೆಯೇ ಚರ್ಚೆ ಆಗುತ್ತಿದೆ. ಮುಂದಿನ ವರ್ಷಗಳಲ್ಲಿ ಅದೇನೇನಾಗುತ್ತದೆಯೋ? ಬೆಂಗಳೂರಿನಲ್ಲಿ ಅಧಿವೇಶನ ನಡೆದಾಗಲೂ ಶೇ 100ರಷ್ಟು ಹಾಜರಾತಿ ಇರುವುದಿಲ್ಲ. ಪಾಲ್ಗೊಳ್ಳುವಿಕೆ ಕಡ್ಡಾಯಗೊಳಿಸಲಾಗುವುದಿಲ್ಲ. ಶಾಸಕರು ಅರ್ಥ ಮಾಡಿಕೊಂಡು ಹಾಜರಾಗಬೇಕಷ್ಟೆ’ ಎಂದು ಹೇಳಿದರು.

‘ಚುನಾವಣೆಗಳಲ್ಲಿ ಗೆಲ್ಲುವ ಸಾಮರ್ಥ್ಯ ಆಧರಿಸಿಯೇ ಪಕ್ಷಗಳು ಟಿಕೆಟ್ ನೀಡುತ್ತವೆ’ ಎಂದರು.

ಬೆಂಗಳೂರು ಪ್ರೆಸ್‌ಕ್ಲಬ್ ಪ್ರಶಸ್ತಿ ಪುರಸ್ಕೃತರಾದ ದಯಾಶಂಕರ ಮೈಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪಡೆದ ಕೆ.ಪಿ. ನಾಗರಾಜ್‌, ಶಿಲ್ಪಾ ಪಿ., ಗುರುಪ್ರಸಾದ್ ತುಂಬಸೋಗೆ, ನಜೀರ್ ಅಹಮದ್, ಶಿವಕುಮಾರ ವಿ. ರಾವ್, ಸಿ.ಜೆ. ಪುನೀತ್ ಅವರನ್ನು ಅಭಿನಂದಿಸಲಾಯಿತು.

ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಉಪಾಧ್ಯಕ್ಷ ರವಿ ಪಾಂಡವಪುರ ಹಾಗೂ ಕಾರ್ಯದರ್ಶಿ ಕೃಷ್ಣೋಜಿರಾವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.