ADVERTISEMENT

ಅಕಾಡೆಮಿಗಳಲ್ಲಿ ಕಲಾವಿದರಲ್ಲದವರಿಗೆ ಸ್ಥಾನ: ಚಿ.ಸು.ಕೃಷ್ಣಸೆಟ್ಟಿ ಬೇಸರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 20:17 IST
Last Updated 20 ಫೆಬ್ರುವರಿ 2021, 20:17 IST
ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಶನಿವಾರ ಮೈಸೂರಿನ ಕಿರುರಂಗಮಂದಿರದಲ್ಲಿ ಮಂಗಳೂರಿನ ಕಂದನ್‌ಜಿ, ವಿಜಯಪುರದ ವಿಜಯ ಸಿಂಧೂರ, ರಘುಪತಿ ಭಟ್‌ ಅವರಿಗೆ ಫೆಲೋಶಿಪ್ ಪ್ರದಾನ ಮಾಡಲಾಯಿತು
ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಶನಿವಾರ ಮೈಸೂರಿನ ಕಿರುರಂಗಮಂದಿರದಲ್ಲಿ ಮಂಗಳೂರಿನ ಕಂದನ್‌ಜಿ, ವಿಜಯಪುರದ ವಿಜಯ ಸಿಂಧೂರ, ರಘುಪತಿ ಭಟ್‌ ಅವರಿಗೆ ಫೆಲೋಶಿಪ್ ಪ್ರದಾನ ಮಾಡಲಾಯಿತು   

ಮೈಸೂರು: ಕೇಂದ್ರ ಲಲಿತಕಲಾ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿಗಳಲ್ಲಿ ಕಲಾವಿದರಲ್ಲದವರು ನೇಮಕವಾಗಿದ್ದಾರೆ ಎಂದು ಕೇಂದ್ರ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿ.ಸು.ಕೃಷ್ಣಸೆಟ್ಟಿ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಶನಿವಾರ ಇಲ್ಲಿನ ಕಿರುರಂಗಮಂದಿರದಲ್ಲಿ ನಡೆದ ಫೆಲೋಶಿಪ್ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲಾವಿದರಲ್ಲದವರು ಲಲಿತಕಲಾ ಅಕಾಡೆಮಿಗೆ ನೇಮಕವಾದರೂ ಕಲಾವಿದರು ವಿರೋಧಿಸದೇ ಇರುವುದು ಸರಿಯಲ್ಲ. ಎಲ್ಲರೂ ವ್ಯಕ್ತಿಕೇಂದ್ರಿತವಾಗಿರುವುದೇ ಇದಕ್ಕೆ ಕಾರಣ ಎಂದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ಲಲಿತಕಲಾ ಅಕಾಡೆಮಿ ಸೇರಿದಂತೆ ಎಲ್ಲ ಅಕಾಡೆಮಿಗಳ ಹಾಗೂ ಕಲಾಕಾಲೇಜುಗಳ ಗುಣಮಟ್ಟ ಕುಸಿಯುತ್ತಿದೆ. ಕಲಾ ವಿಮರ್ಶೆಗೆ ದಿನಪತ್ರಿಕೆಗಳೂ ಆದ್ಯತೆ ನೀಡುತ್ತಿಲ್ಲ ಎಂದು ಬೇಸರಿಸಿದರು.

ತಟಸ್ಥರಾಗಿರುವುದಕ್ಕೆ ಅವಕಾಶ ಇಲ್ಲದ ಸ್ಥಿತಿ ಈಗ ನಿರ್ಮಾಣವಾಗಿದೆ. ಎಡಪಂಥೀಯ ಇಲ್ಲವೇ ಬಲಪಂಥೀಯ ಎಂದೇ ತೀರ್ಮಾನಿಸಲಾಗುತ್ತಿದೆ. ಇದು ಸರಿಯಲ್ಲ. ದೇಶದಲ್ಲಿ ಬಹುತ್ವವನ್ನು ಉಳಿಸಬೇಕಿದೆ ಎಂದು ಹೇಳಿದರು.

ಸಾಹಿತಿ ಪ್ರಧಾನ್‌ ಗುರುದತ್ ಮಾತನಾಡಿ, ‘ಮೈಸೂರು ವಿಶ್ವವಿದ್ಯಾನಿಲಯ ಸೇರಿದಂತೆ ಇತರೆ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪನೆಯಾಗಿರುವ ಲಲಿತಕಲಾ ಕಾಲೇಜುಗಳ ಸ್ಥಿತಿ ಶೋಚನೀಯವಾಗಿದೆ. ಇವುಗಳನ್ನು ಸರಿಪಡಿಸುವ ಕಾರ್ಯ ಆಗಬೇಕಿದೆ’ ಎಂದರು.

ಕಲಾವಿದರಾದ ವಿಜಯಪುರದ ವಿಜಯ ಸಿಂಧೂರ, ಮಂಗಳೂರಿನ ಕಂದನ್‌ಜಿ, ಮೈಸೂರಿನ ರಘುಪತಿ ಭಟ್ಟ ಅವರಿಗೆ ತಲಾ ₹ 2 ಲಕ್ಷ ಮೊತ್ತದ ಗೌರವ ಫೆಲೋಶಿಪ್‌ ಪ್ರದಾನ ಮಾಡಲಾಯಿತು. ಬೆಂಗಳೂರಿನ ಡಿಂಪಲ್ ಬಿ ಶಹ, ಮಂಜುನಾಥ ವಿ ಕಲ್ಲೇದೇವರು, ಮೈಸೂರಿನ ಕೆ.ಸುರೇಶ್, ವಿಜಯಪುರದ ನಿಂಗನಗೌಡ ಸಿ.ಪಾಟೀಲ, ಕಲಬುರ್ಗಿಯ ಜಗನ್ನಾಥ ಬೆಲ್ಲದ ಅವರಿಗೆ ಶಿಷ್ಯವೇತನ ವಿತರಿಸಲಾಯಿತು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ.ಮಹೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.