ADVERTISEMENT

ಮೈಸೂರು: ₹ 8 ಕೋಟಿ ಮೌಲ್ಯದ ಭೂಮಿ ವಶ

ಅನಧಿಕೃತ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 17:43 IST
Last Updated 17 ಆಗಸ್ಟ್ 2020, 17:43 IST
ಮುಡಾ ವಶಪಡಿಸಿಕೊಂಡ ಜಮೀನು
ಮುಡಾ ವಶಪಡಿಸಿಕೊಂಡ ಜಮೀನು   

ಮೈಸೂರು: ತನ್ನ ಒಡೆತನದ ₹ 8 ಕೋಟಿ ಮೌಲ್ಯದ 1.20 ಎಕರೆ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಿದ ಮುಡಾ, ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ತಡೆ ಹಾಕಿ, ಜಮೀನನ್ನು ತನ್ನ ಸ್ವಾಧೀನಕ್ಕೆ ಮರು ವಶಪಡಿಸಿಕೊಂಡಿದೆ.

ಒತ್ತುವರಿದಾರರು ಸರ್ಕಾರದ ಆಸ್ತಿಗಳನ್ನು ನಾಶಪಡಿಸಿ ಹಾಗೂ ನಷ್ಟ ಉಂಟು ಮಾಡಿರುವುದರಿಂದ, ಈ ಅನಧಿಕೃತ ಒತ್ತುವರಿದಾರರ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದೆ.

ದೇವನೂರು ಗ್ರಾಮದ ಸರ್ವೆ ನಂಬರ್‌ 26, 27, 28/1ಎ, 2/1 ಬಿ1, 28/1 ಬಿ1, 23/2, 29/1, 291 ಬಿ ಮತ್ತು 29/2ರ 7.31 ಎಕರೆ ಜಮೀನನ್ನು ಪ್ರಾಧಿಕಾರವು ಪರಸ್ಪರ ಒಪ್ಪಂದದ ಮೂಲಕ ಭೂಸ್ವಾಧೀನ ಪಡಿಸಿಕೊಂಡು, ಸಂಬಂಧಪಟ್ಟ ಭೂ ಮಾಲೀಕರಿಗೆ ಪರಿಹಾರ ಪಾವತಿಸಿದೆ. ಈ ಜಮೀನುಗಳ ಭೂ ಪ್ರದೇಶವನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣ ಮಾಡಲು ಕಾಯ್ದಿರಿಸಿದೆ.

ADVERTISEMENT

ಈ ಕಾಯ್ದಿರಿಸಿದ ಭೂಮಿಯಲ್ಲೇ ಒತ್ತುವರಿದಾರರು 1.20 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದರು.

ಪ್ರಾಧಿಕಾರದ ಅಧೀಕ್ಷಕ ಎಂಜಿನಿಯರ್‌ ಶಂಕರ್, ಕಾರ್ಯಪಾಲಕ ಎಂಜಿನಿಯರ್ ಸುವರ್ಣಾ ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿದಾರರ ಹಾಜರಿಯಲ್ಲೇ ಸ್ವತ್ತುಗಳನ್ನು ವಶಕ್ಕೆ ಪಡೆದು, ಪ್ರಾಧಿಕಾರದ ಆಸ್ತಿ ಎಂದು ನಾಮಫಲಕ ಅಳವಡಿಸಿದ್ದಾರೆ. ವಲಯ ಅಧಿಕಾರಿ ಜಿ.ಮೋಹನ್, ಸಹಾಯಕ ಎಂಜಿನಿಯರ್‌ ರಾಜಶೇಖರ್ ಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.