ADVERTISEMENT

ಅನುವಾದ: ಭಾಷಾ ಜ್ಞಾನ ಅಗತ್ಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 13:08 IST
Last Updated 12 ಆಗಸ್ಟ್ 2022, 13:08 IST

ಮೈಸೂರು: ‘ಕೃತಿಗಳ ಅನುವಾದಕ್ಕೆ ಭಾಷಾ ಜ್ಞಾನ ಅವಶ್ಯ’ ಎಂದು ವಿಮರ್ಶಕ ಓ.ಎಲ್‌.ನಾಗಭೂಷಣಸ್ವಾಮಿ ತಿಳಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಭಾಷಾಂತರ ಕಮ್ಮಟದಲ್ಲಿ ಅವರು ಮಾತನಾಡಿದರು.

‘ಯಾವುದರಿಂದ ಯಾವುದಕ್ಕೆ ಅನುವಾದ ಮಾಡುತ್ತೇವೆಯೋ ಆ ಎರಡೂ ಭಾಷೆಗಳ ಬಗ್ಗೆ ಆಳವಾದ ಜ್ಞಾನವಿರಬೇಕು’ ಎಂದರು.

ADVERTISEMENT

‘ಬೈಬಲ್ ಅನ್ನು ಎಷ್ಟು ಭಾಷೆಯಲ್ಲಿ ಅನುವಾದಿಸಬೇಕು ಎಂಬ ಬಗ್ಗೆ ಸಮೀಕ್ಷೆ ನಡೆಸಲಾಯಿತು. ಇದು ದೇವರ ಮಾತುಗಳು ಇರುವ ಗ್ರಂಥವಾಗಿದ್ದು, ಬೇರೆ ಭಾಷೆಗಳಲ್ಲಿ ಹೇಳಿದರೆ ಅಪಚಾರವಾಗುತ್ತದೆ ಎಂಬ ವಿರೋಧವೂ ವ್ಯಕ್ತವಾಗಿತ್ತು’ ಎಂದು ಹೇಳಿದರು.

‘ಭಾಷಾಂತರ ಎಂದು ಹೇಳುವುದಕ್ಕೂ ಮುನ್ನ ಪುನರ್ ಲೇಖನ ಎನ್ನಲಾಗುತ್ತಿತ್ತು. ಅಂದರೆ, ಒಂದು ಭಾಷೆಯ ಲೇಖನವನ್ನು ನನ್ನ ಭಾಷೆಗೆ ಬೇಕಾದಂತೆ ಬರೆಯುವುದು. ಮೂಲದಲ್ಲಿದ್ದಂತೆ ಇರಬೇಕು ಎನ್ನುವುದು ಮತ್ತು ನಮಗೆ ಬೇಕಾದಂತೆ ಮಾಡಿಕೊಳ್ಳುವುದು ಭಾಷಾಂತರದ ಎರಡು ತುದಿಗಳು’ ಎಂದು ನುಡಿದರು.

ಉದ್ಘಾಟಿಸಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ್ ಭಟ್, ‘ಪ್ರಾಧಿಕಾರದಿಂದ ಅನುವಾದಕ್ಕೆ ಸಂಬಂಧಿಸಿದ ಪುಸ್ತಕಗಳು ಪ್ರಕಟಗೊಂಡಿವೆ. ವರ್ಷದಲ್ಲಿ 4 ತಿಂಗಳು ಶೇ.50ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಲಾಗುತ್ತಿದೆ. ಭಾಷಾಂತರಕ್ಕೆ ಸಂಬಂಧಿಸಿದ ಕಮ್ಮಟ, ತರಬೇತಿ ಕಾರ್ಯಾಗಾರಗಳನ್ನು ರಾಜ್ಯದಾದ್ಯಂತ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಕಾಲೇಜಿನ ಉಪನ್ಯಾಸಕರಿಗೆ ಉಚಿತ ಊಟ ಮತ್ತು ವಸತಿಸಹಿತ ತರಬೇತಿಗೆ ತಿರ್ಮಾನಿಸಲಾಗಿದೆ. ಇದನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೂ ವಿಸ್ತರಿಸುವ ಯೋಜನೆ ಇದೆ’ ಎಂದರು.

ರೆ.ಡಾ.ಬರ್ನಾರ್ಡ್ ಪ್ರಕಾಶ್ ಬಾರ್ನಿಸ್, ಪ್ರಾಂಶುಪಾಲ ಡಾ.ರವಿ ಜೆ.ಡಿ.ಸಲ್ಡಾನ್ಹಾ, ಸಾಹಿತಿ ಅಬ್ದುಲ್ ರಶೀದ್, ಕಮ್ಮಟದ ಸಂಚಾಲಕ ಪ್ರೊ.ಸದೆಬೋಸ್ ಎ.ಟಿ. ಇದ್ದರು.

ಎಚ್ಚರಿಕೆಯಿಂದ ಮಾಡಬೇಕು

ಅನುವಾದವನ್ನು ಎಚ್ಚರಿಕೆಯಿಂದ ಮಾಡಬೇಕು. ಆ ಜ್ಞಾನವನ್ನು ಶ್ರಮಪಟ್ಟು ಸಂಪಾದಿಸಿಕೊಳ್ಳಬೇಕು.

–ಓ.ಎಲ್‌.ನಾಗಭೂಷಣಸ್ವಾಮಿ, ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.