ADVERTISEMENT

ಕೃಷ್ಣರಾಜದಲ್ಲೇ ಅತ್ಯಧಿಕ ಮುನ್ನಡೆ: ರಾಮದಾಸ್‌

‘ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ 97 ಸಾವಿರ ಮತ’

​ಪ್ರಜಾವಾಣಿ ವಾರ್ತೆ
Published 23 ಮೇ 2019, 18:57 IST
Last Updated 23 ಮೇ 2019, 18:57 IST
ಎಸ್‌.ಎ.ರಾಮದಾಸ್‌
ಎಸ್‌.ಎ.ರಾಮದಾಸ್‌   

ಮೈಸೂರು: ‘ಲೋಕಸಭಾ ಚುನಾವಣೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಅತ್ಯಧಿಕ ಮುನ್ನಡೆ ಲಭಿಸಿದೆ. 52 ಸಾವಿರಕ್ಕೂ ಅಧಿಕ ಮತಗಳನ್ನು ಪ್ರಬುದ್ಧ ಮತದಾರರು ನೀಡುವ ಮೂಲಕ ಕ್ಷೇತ್ರವು ಪಕ್ಷದ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದಾರೆ’ ಎಂದು ಬಿಜೆಪಿ ಮುಖಂಡ, ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಪ್ರಚಾರಕ್ಕೆಂದು ಬಂದಾಗ ಕೃಷ್ಣರಾಜ ಕ್ಷೇತ್ರದಿಂದ ಲಕ್ಷ ಮತಗಳನ್ನು ಗಳಿಸಿಕೊಡುವ ಭರವಸೆ ನೀಡಿದ್ದೆವು. ಅಂದಿನಿಂದ ಕಾರ್ಯಕರ್ತರ ಪಡೆಯೊಂದಿಗೆ ಹಗಲಿರುಳು ಶ್ರಮಿಸಿ ಸುಮಾರು 97 ಸಾವಿರ ಮತಗಳನ್ನು ಪಕ್ಷದ ಅಭ್ಯರ್ಥಿಗೆ ಕೊಡಿಸಿದ್ದೇವೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನನ್ನ ಕ್ಷೇತ್ರದಲ್ಲೇ ಅತೀ ಹೆಚ್ಚು ಮುನ್ನಡೆ ಲಭಿಸಿದೆ’ ಎಂದರು.

‘ದೇಶ ಸೇವೆ ಮಾಡಲು ಚೌಕೀದಾರ್ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಈ ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡುವ ಮೂಲಕ ದೇಶದ ಪ್ರಬುದ್ಧ ಮತದಾರರು ಆಶೀರ್ವಾದ ಮಾಡಿದ್ದಾರೆ. ಬಿಜೆಪಿಗೆ 300ಕ್ಕೂ ಹೆಚ್ಚು ಸ್ಥಾನ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ 350 ಸ್ಥಾನಗಳು ಬರುವಂತೆ ಮಾಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕಳೆದ ವರ್ಷ ಇದೇ ಅವಧಿಯಲ್ಲಿ ಮೈತ್ರಿ ಸರ್ಕಾರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 21 ವಿಪಕ್ಷಗಳ ನಾಯಕರು ಮೋದಿ ಅವರನ್ನು ಸೋಲಿಸುವ ಉದ್ದೇಶದಿಂದ ಮಹಾಘಟಬಂಧನ್‌ ಆರಂಭಿಸಿದ್ದರು. ಆದರೆ, ಕೇವಲ ಒಂದು ವರ್ಷದಲ್ಲಿ ಅದು ಮೋದಿ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಲೋಕಸಭೆಯಲ್ಲಿ ವಿಪಕ್ಷ ಸ್ಥಾನಕ್ಕೆ ಸಿಗಬೇಕಾದಷ್ಟು ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಲಭಿಸಿಲ್ಲ’ ಎಂದು ನುಡಿದರು.

‘ಜಾತಿ, ಮತ, ಧರ್ಮದ ಆಧಾರದ ಮೇಲೆ ಚುನಾವಣೆ ನಡೆಸುತ್ತಿದ್ದ ಪದ್ಧತಿಗೆ ಮತದಾರರು ಈ ಬಾರಿ ಪಾಠ ಕಲಿಸಿದ್ದಾರೆ. ಮೋದಿ ಅವರು ರಾಷ್ಟ್ರೀಯತೆ ಹಾಗೂ ಸಬ್‌ ಕಾ ಸಾತ್ ಸಬ್ ಕಾ ವಿಕಾಸ್‌ ಎಂಬ ಧ್ಯೇಯದೊಂದಿಗೆ ಚುನಾವಣೆ ಎದುರಿಸಿ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ’ ಎಂದರು.

‘ರಾಜ್ಯದಲ್ಲಿ 25 ಸ್ಥಾನಗಳನ್ನು ಬಿಜೆಪಿಗೆ ನೀಡುವುದರ ಮೂಲಕ ಮೈತ್ರಿ ಸರ್ಕಾರವನ್ನು ಮತ್ತೊಂದು ಬಾರಿ ಮತದಾರರು ತಿರಸ್ಕರಿಸಿದ್ದಾರೆ. ಅಲ್ಲದೇ, ಪ್ರಮುಖ ನಾಯಕರನ್ನು ಸೋಲಿಸಿ ತಕ್ಕ ಪಾಠ ಕಲಿಸಿದ್ದಾರೆ' ಎಂದು ಹೇಳಿದರು.

‘ಅಭೂತಪೂರ್ವ ಗೆಲುವು ತಂದುಕೊಟ್ಟ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ, ಪಕ್ಷದ ನಾಯಕರಿಗೆ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಮತ್ತು ಪ್ರಬುದ್ಧ ಮತದಾರರಿಗೆ ಧನ್ಯವಾದ ಹೇಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.