
ಮೈಸೂರು: ‘ಕಾನೂನು ಮತ್ತು ಸುವ್ಯವಸ್ಥೆ ಅರ್ಥೈಸಿಕೊಂಡು ದುರ್ಬಲ ಪರಿಸರವನ್ನು ಉತ್ತಮವಾಗಿ ಕಟ್ಟುವ ಕೆಲಸವಾಗಬೇಕಿದೆ’ ಎಂದು ವಿಜಯನಗರ ಉಪ ವಿಭಾಗದ ಎಸಿಪಿ ರವಿಪ್ರಸಾದ್ ತಿಳಿಸಿದರು.
ಒಡನಾಡಿ ಸೇವಾ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಗಂಡು ಮಕ್ಕಳ ಸಂವೇದನಾಶೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಶಿಕ್ಷಣ ಮತ್ತು ಸಂವೇದನಾಶೀಲತೆಯಿಂದ ಪಡೆದ ಜ್ಞಾನವು ಗುರಿ ಮುಟ್ಟಲು ಸಹಾಯ ಮಾಡುತ್ತದೆ. ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನದ ದುರುಪಯೋಗ ಹೆಚ್ಚುತ್ತಿದೆ. ಇದರಿಂದ ಯುವ ಸಮೂಹ ದಾರಿ ತಪ್ಪುತ್ತಿದ್ದು, ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಉತ್ತಮ ಮಾಹಿತಿ ಸಂಗ್ರಹಿಸಲಷ್ಟೇ ಬಳಸಬೇಕು’ ಎಂದು ಸಲಹೆ ನೀಡಿದರು.
‘ಗಂಡು ಮಕ್ಕಳು ಕೂಡ ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವುದು ವಿಷಾದನೀಯ. ಹೆಣ್ಣು ಹಾಗೂ ಗಂಡು ಮಕ್ಕಳು ಸ್ವರಕ್ಷಣಾ ತಂತ್ರಗಳನ್ನು ಕಲಿಯಬೇಕು’ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರವಿಚಂದ್ರನ್ ಮಾತನಾಡಿ, ‘ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಮೌನವಾಗಿ ಸಹಿಸಿಕೊಳ್ಳಬಾರದು. ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಇದರಿಂದ ಭವಿಷ್ಯಕ್ಕೆ ಸಹಾಯಕವಾಗುತ್ತದೆ’ ಎಂದು ಹೇಳಿದರು.
ಸಂಸ್ಥೆಯು ಆಯೋಜಿಸಿದ್ದ ಇಂಗ್ಲಿಷ್ ಮತ್ತು ಕಂಪ್ಯೂಟರ್ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಒಡನಾಡಿ ಸಂಸ್ಥೆ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶುರಾಮ್, ಸಿಬ್ಬಂದಿಗಳಾದ ಪ್ರದೀಪ್, ಶಶಾಂಕ್, ಬಾಲ ಕುಮಾರ್, ನಾಜಿಯಾ, ಚಂದನ ಹಾಗೂ ಗ್ರಂಥಾಲಯ ಪಾಲಕಿ ಗೀತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.