ADVERTISEMENT

ಮೈಸೂರು | ಬಾವಿಯಿಂದ ರಕ್ಷಣೆ ಮಾಡಿದ ಚಿರತೆ ಕಾಡಿಗೆ

ಸುಂಕದಕಟ್ಟೆ ಪ್ರವಾಸಿಮಂದಿರದಲ್ಲಿ ಗ್ಲೂಕೋಸ್‌ ನೀಡಿ ಉಪಚರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 17:13 IST
Last Updated 21 ಜುಲೈ 2020, 17:13 IST
ಬಾವಿಯಿಂದ ಮೇಲೆ ತೆಗದ ಚಿರತೆಯನ್ನು ಬೋನಿನಲ್ಲಿಟ್ಟು ಚಿಕಿತ್ಸೆ ನೀಡಿದ ನಂತರ ತೀವ್ರ ಲವಲವಿಕೆಯಿಂದ ಕಾಣಿಸಿದ್ದು
ಬಾವಿಯಿಂದ ಮೇಲೆ ತೆಗದ ಚಿರತೆಯನ್ನು ಬೋನಿನಲ್ಲಿಟ್ಟು ಚಿಕಿತ್ಸೆ ನೀಡಿದ ನಂತರ ತೀವ್ರ ಲವಲವಿಕೆಯಿಂದ ಕಾಣಿಸಿದ್ದು   

ಎಚ್.ಡಿ.ಕೋಟೆ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ವ್ಯಾಪ್ತಿಯ ಕಾರಾಪುರ ಗ್ರಾಮದ ಪಾಳು ಬಾವಿಯಲ್ಲಿ ಬಿದ್ದ ಚಿರತೆಯನ್ನು ಮೇಲೆ ತೆಗೆದ ನಂತರ ಅದರ ಆರೋಗ್ಯ ಪರಿಶೀಲಿಸಿ, ಚಿಕಿತ್ಸೆ ನೀಡಿದ ನಂತರ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಕೈಮರ ಗಸ್ತಿನಲ್ಲಿ ಮಂಗಳವಾರ ಬಿಡಲಾಯಿತು.

ಎರಡು ವರ್ಷದ ಹೆಣ್ಣು ಚಿರತೆಯಾಗಿದ್ದು, ಬಾವಿಯಿಂದ ಮೇಲೆ ತರಲು ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಂಕದಕಟ್ಟೆ ಪ್ರವಾಸಿಮಂದಿರದಲ್ಲಿ ಚಿರತೆಯನ್ನು ಇರಿಸಿ, ಸೋಮವಾರದಿಂದ ಆರೋಗ್ಯ ಪರಿವೀಕ್ಷಣೆ ಮಾಡಲಾಯಿತು. ಗ್ಲೂಕೋಸ್ ನೀಡಿ ಇತರೆ ತಪಾಸಣೆ ನಡೆಸಲಾಯಿತು. ಚಿರತೆ ಮೈಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲದಿರುವುದು ಮತ್ತು ಆರೋಗ್ಯವಾಗಿದ್ದರಿಂದ, ಇಲಾಖೆ ಮೇಲಧಿಕಾರಿಗಳು ಚರ್ಚೆ ನಡೆಸಿ ಕಾಡಿಗೆ ಬಿಡಲಾಯಿತು.

ಸುಮಾರು 100 ಅಡಿ ಆಳದ ಬಾವಿಗೆ ಏಕಾಎಕಿ ಚಿರತೆ ನೆಗೆದು ಬಿದ್ದಿದ್ದರೂ ಅದರ ಮೈಮೇಲೆ ಸಣ್ಣಪುಟ್ಟಗಾಯಗಳೂ ಆಗಿಲ್ಲ. ಬಾಯಿಯಲ್ಲಿ ನೀರು ಸಹ ಇರಲಿಲ್ಲ ಎಂದು ವಲಯ ಅರಣ್ಯಾಧಿಕಾರಿ ಸಿದ್ದರಾಜು ತಿಳಿಸಿದರು.

ಡಿಸಿಎಫ್ ಮಹೇಶ ಕುಮಾರ್, ಎಸಿಎಪ್ ಅಂತೋಣಿ ಪೌಲ್, ಅಂತರಸಂತೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಸಿದ್ದರಾಜು, ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಮಧು, ಅಮಿತ್, ವಿನಯ್ ರಾವತ್, ವನ್ಯ ಜೀವಿ ಉಪ ವಿಭಾಗದ ವೈದ್ಯ ಡಾ.ಮುಜೀಬ್, ಸಹಾಯಕ ಅಕ್ರಂ ಸೇರಿದಂತೆ, ಎಸ್ಟಿಪಿಎಫ್‌ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.