
ಮೈಸೂರು: ಮೈಸೂರು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಕಾಡಿನಿಂದ ನಾಡಿನಂಚಿಗೆ ಅಥವಾ ನಾಡಿಗೆ ಬಂದಿದ್ದ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಒಟ್ಟು 308 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಈ ಪೈಕಿ ಮೈಸೂರಿನಲ್ಲಿ ಅತಿ ಹೆಚ್ಚು ಅಂದರೆ 251 ಚಿರತೆಗಳನ್ನು ಸಂರಕ್ಷಿಸಲಾಗಿದೆ. ಚಿರತೆ ಕಾರ್ಯಪಡೆ ರಚನೆ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ.
ದಕ್ಷಿಣ ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಚಿರತೆ ಕಾರ್ಯಾಚರಣೆಯ ಮಾಹಿತಿಯನ್ನು ಒದಗಿಸಿದ್ದಾರೆ. ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ ಆಧರಿಸಿ ಮಧು ಅವರು ಸಚಿವರನ್ನು ಪ್ರಶ್ನಿಸಿದ್ದರು.
ಐವರು ಸಾವು:
2021–22ರಿಂದ 2025–26ನೇ ಸಾಲಿನಲ್ಲಿ ಈವರೆಗೆ ಮೈಸೂರು, ಹುಣಸೂರು, ಮಂಡ್ಯ ಹಾಗೂ ಮೈಸೂರು ವನ್ಯಜೀವಿ ವಲಯದಲ್ಲಿ ಚಿರತೆಗಳ ದಾಳಿಯಿಂದ ಒಟ್ಟು 4,799 ಜಾನುವಾರು ಸಾವಿಗೀಡಾಗಿವೆ. ಐವರು ಪ್ರಾಣ ಕಳೆದುಕೊಂಡಿದ್ದರೆ, 54 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟ ಐವರ ಕುಟುಂಬದವರಿಗೆ ಪರಿಹಾರವಾಗಿ ಒಟ್ಟು ₹ 60 ಲಕ್ಷ ಪರಿಹಾರ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾದ ಚಿರತೆಗಳ ಆರೋಗ್ಯದ ಬಗ್ಗೆ ಪಶು ವೈದ್ಯಾಧಿಕಾರಿಗಳಿಂದ ವೈದ್ಯಕೀಯ ತಪಾಸಣೆ ನಡೆಸಿ, ಸೂಕ್ತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಗ್ಯದ ಸಮಸ್ಯೆಗಳು ಕಂಡುಬಂದಲ್ಲಿ ಆರೈಕೆ ಮತ್ತು ರಕ್ಷಣೆಗಾಗಿ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಪುನರ್ವಸತಿ ಕೇಂದ್ರಕ್ಕೆ ಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಿಯಂತ್ರಣಕ್ಕೆ ಕಾರ್ಯಪಡೆ:
ಮೈಸೂರು ವೃತ್ತದ ಮೈಸೂರು, ನಂಜನಗೂಡು, ಎಚ್.ಡಿ. ಕೋಟೆ, ಸರಗೂರು, ತಿ. ನರಸೀಪುರ, ಮಂಡ್ಯ, ಪಾಂಡವಪುರ ಹಾಗೂ ನಾಗಮಂಗಲದ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ನಿಭಾಯಿಸುವ ಸಂಬಂಧ 2023ರ ಜ.31ರಲ್ಲಾದ ಆದೇಶದಂತೆ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ‘ಚಿರತೆ ಕಾರ್ಯಪಡೆ’ (ಲೆಪರ್ಡ್ ಟಾಸ್ಕ್‌ಫೋರ್ಸ್) ರಚಿಸಲಾಗಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವುದಕ್ಕಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಅಲ್ಲಿಗೆ ಬರುವ ಕರೆಗಳಿಗೆ ಸ್ಪಂದಿಸಿ ಚಿರತೆ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕಾರ್ಯಪಡೆಯಲ್ಲಿ ಒಟ್ಟು 58 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ಥಳಾಂತರಕ್ಕೆ ಕ್ರಮ:
ಚಿರತೆ ಹಾವಳಿ ಅಥವಾ ಕಂಡುಬರುವ ಗ್ರಾಮಗಳಲ್ಲಿ ಹಾಗೂ ಅರಣ್ಯದ ಅಂಚಿನಲ್ಲಿ ಚಿರತೆ ಬೋನುಗಳನ್ನು ಇಡಲಾಗುತ್ತಿದೆ. ಬೋನಿಗೆ ಬಿದ್ದ ಚಿರತೆಗಳನ್ನು ಚಾಲ್ತಿಯಲ್ಲಿರುವ ನಿಯಮಾನುಸಾರ ಸೂಕ್ತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ. ರೈತರಿಗೆ ಸಹಾಯಧನದಲ್ಲಿ ಸೋಲಾರ್ (ಸೌರಶಕ್ತಿ) ಬೇಲಿ ನಿರ್ಮಾಣಕ್ಕೆ ಉತ್ತೇಜನ ನೀಡಲಾಗುತ್ತಿದೆ. ಅರಣ್ಯದ ಅಂಚಿನಲ್ಲಿ ಬರುವ ಖಾಸಗಿ ಜಮೀನುಗಳ ಸುತ್ತ ಸರ್ಕಾರದ ವತಿಯಿಂದ ದೊರಕುವ ಶೇ 50ರಷ್ಟು ಸಬ್ಸಿಡಿ ಬಳಸಿಕೊಂಡು ಸೌರಶಕ್ತಿ ಬೇಲಿಗಳನ್ನು ಹಾಕಲಾಗುತ್ತಿದೆ.
ಜಿಲ್ಲೆಯ ಮೈಸೂರು ತಾಲ್ಲೂಕಿನ ಇಲವಾಲದಲ್ಲಿ ಚಿರತೆಗಳ ಸಂರಕ್ಷಣೆಗೆಂದೇ ಪುನರ್ವಸತಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಪ್ರಸ್ತಾವವು ಪರಿಶೀಲನೆಯ ಹಂತದಲ್ಲಿದೆ ಎಂದು ಖಂಡ್ರೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.