ಮೈಸೂರು: ‘ಪಂಪ, ಅಂಬೇಡ್ಕರ್, ವಾಲ್ಮೀಕಿ, ಕನಕದಾಸರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿರುವಂತೆ ಸರ್ಕಾರವು ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲೂ ಪ್ರಶಸ್ತಿ ಆರಂಭಿಸಬೇಕು’ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
ನಗರದಲ್ಲಿ ಶನಿವಾರ ಎನ್.ಚಿಕ್ಕಮಾದು ಅವರ ‘ಪ್ರಜಾಮಾತೆ’ ಹಾಗೂ ಕೃಷ್ಣರಾಜಭೂಪ ಮನೆಮನೆ ದೀಪ’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ‘ಸಿನಿಮಾ, ಸಾಹಿತ್ಯ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರಕ್ಕೆ ಕರ್ನಾಟಕ ಹೆಚ್ಚು ಕೊಡುಗೆ ನೀಡುತ್ತಿದೆ. ಸರ್ಕಾರ ನಾಲ್ವಡಿ ಪ್ರಶಸ್ತಿ ಸ್ಥಾಪಿಸಿ, ಅವರ ಜಯಂತಿಯಲ್ಲಿ ಸಾಧಕರನ್ನು ಸನ್ಮಾನಿಸಬೇಕು’ ಎಂದರು.
‘ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ₹25 ಸಾವಿರ ನಗದು ಸಮೇತ ಈ ಹಿಂದೆ ಪ್ರಶಸ್ತಿ ಪ್ರದಾನ ಮಾಡುತ್ತಿತ್ತು. ಈಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಸ್ತಾಂತರಿಸಿದೆ. ಅದು ಎಷ್ಟಾದರೂ ಖಾಸಗಿ ಸಂಸ್ಥೆ. ಸರ್ಕಾರ ಈ ಕೆಲಸ ಮಾಡಬೇಕು’ ಎಂದರು.
‘ಮಹಾನ್ ನಾಯಕರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಯೊಂದಿಗೆ ₹ 5ಲಕ್ಷ ನೀಡುತ್ತಿದೆ. ಎಷ್ಟು ಲಕ್ಷ ಮೀಸಲಿಡುತ್ತದೆಂಬುದು ಮುಖ್ಯವಲ್ಲ. ಲಕ್ಷ್ಯ ಕೊಡಬೇಕು. ಪ್ರತಿ ವರ್ಷ ಸಾಧ್ಯವಾದರೆ ರಾಷ್ಟ್ರ ಪ್ರಶಸ್ತಿಯನ್ನೇ ನೀಡಿ ಈ ಭಾಗದ ಚರಿತ್ರೆ ಎಷ್ಟು ಜನಪರವಾಗಿತ್ತು ಎಂಬುದನ್ನು ನಾಡಿಗೆ ತೋರಿಸಿಕೊಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.