ಮೈಸೂರು: ನಗರದ ಪುರಭವನ ಎದುರಿನ ಪಾರಂಪರಿಕ ಹೆಗ್ಗುರುತು ‘ದೊಡ್ಡ ಗಡಿಯಾರ’ಕ್ಕೆ ಸಿಡಿಲಾಘಾತದ ಅಪಾಯ ಎದುರಾಗಿದೆ. ಅರ್ಥಿಂಗ್ ವ್ಯವಸ್ಥೆ ಇಲ್ಲವಾಗಿದ್ದು, ದುರಸ್ತಿ ವೇಳೆ ನಾಲ್ಕು ಕಿರು ಗುಮ್ಮಟಗಳೂ ಮಾಯವಾಗಿವೆ.
ಶಿಥಿಲಗೊಂಡಿದ್ದ ದೊಡ್ಡ ಗಡಿಯಾರ ಕಟ್ಟಡ ದುರಸ್ತಿಗೆ ಪಾಲಿಕೆಯು ವರ್ಷದ ಹಿಂದೆ ₹ 38 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ಕಾಮಗಾರಿ ಪೂರ್ಣಗೊಂಡಿದ್ದರೂ ಕಟ್ಟಡಕ್ಕೆ ಸಿಡಿಲಾಘಾತ ತಾಳಿಕೊಳ್ಳುವ ಶಕ್ತಿಯನ್ನು ಅಳವಡಿಸಿಲ್ಲ.
ಕಟ್ಟಡ ನಿರ್ಮಾಣಗೊಂಡಾಗ ಸಿಡಿಲಿನಿಂದ ರಕ್ಷಣೆಗೆ ಎರಡು ಇಂಚಿನ ತಾಮ್ರದ ತಂತಿಯನ್ನು ಗ್ರೌಂಡಿಂಗ್ ಮಾಡಲಾಗಿತ್ತು. ಅದರ ಅರ್ಧ ಭಾಗ ಕಳವಾಗಿತ್ತು. ದುರಸ್ತಿ ವೇಳೆ ಅಳವಡಿಸುವ ಹಾಗೂ ಮೇಲ್ವಿಚಾರಣೆ ಮಾಡುವ ಕೆಲಸವನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಮಾಡಿಲ್ಲ.
‘ಅರ್ಥಿಂಗ್‌ಗೆ ತಾಮ್ರದ ತಂತಿಯನ್ನೇ ಬಳಸಬೇಕು. ಈ ಹಿಂದೆ ಅಳವಡಿಸಿದ್ದ ತಾಮ್ರದ ಪಟ್ಟಿಯು ತುಂಡಾಗಿದೆ. ದುರಸ್ತಿ ವೇಳೆ ತುಂಡಾಗಿರುವ ತಂತಿ ಸರಿಪಡಿಸುವ, ಇಲ್ಲವೇ ಹೊಸದಾಗಿ ಅಳವಡಿಸುವ ಕೆಲಸವನ್ನು ಗುತ್ತಿಗೆದಾರರು ಮಾಡಬೇಕಿತ್ತು’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮರದ ಅರಮನೆಗೂ ಹಿಂದೆ ಟಿಪ್ಪು ಕಾಲದಲ್ಲಿದ್ದ ಸೌಂದರ್ಯ ವಿಲಾಸ ಅರಮನೆಯು 1794ರಲ್ಲಿ ಸಿಡಿಲು ಬಡಿದು ನಾಶವಾಗಿತ್ತು. ಅದೇ ಪರಿಸ್ಥಿತಿ ದೊಡ್ಡಗಡಿಯಾರಕ್ಕೂ ಬರಬಹುದು. ತಂತಿಯ ಮೇಲಿನ ಭಾಗದಲ್ಲೂ ಪಟ್ಟಿ ಬಿಳಿ ಬಣ್ಣಕ್ಕೆ ತಿರುಗಿದೆ. ಪಾಲಿಕೆಯು ಎಚ್ಚೆತ್ತುಕೊಳ್ಳಬೇಕು’ ಎಂದರು.
1927ರಲ್ಲಿ ನಿರ್ಮಾಣ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ರಜತ ಮಹೋತ್ಸವದ ನೆನಪಿನಲ್ಲಿ 1927ರಲ್ಲಿ ರಾಜಸ್ಥಾನದ ಮರಳು ಶಿಲೆ ಹಾಗೂ ಸುರ್ಕಿಗಾರೆ ಬಳಸಿ ದೊಡ್ಡಗಡಿಯಾರ ನಿರ್ಮಿಸಲಾಗಿತ್ತು.
ಗೋಪುರದ ಕಮಾನಿನಲ್ಲಿ ಬಳಸಲಾದ ಕಬ್ಬಿಣ ತುಕ್ಕು ಹಿಡಿದು ಬಿರುಕು ಮೂಡಿತ್ತು. ನೆಲಮಟ್ಟದಲ್ಲಿ ಹೆಗ್ಗಣಗಳು ಬಿಲ ತೋಡಿ ಕಟ್ಟಡವನ್ನು ಮತ್ತಷ್ಟು ಶಿಥಿಲಗೊಳಿಸಿದ್ದವು. ಗಡಿಯಾರದ ಗೋಪುರದಲ್ಲಿನ ಗಂಟೆ ಸದ್ದು ದಶಕದ ಹಿಂದೆಯೇ ನಿಲ್ಲಿಸಲಾಗಿದೆ.
98 ವರ್ಷದ ಐತಿಹಾಸಿಕ ಕಟ್ಟಡ ವರ್ಷದ ಹಿಂದೆ ದುರಸ್ತಿ ಆರಂಭ ಅಳವಡಿಕೆಯಾಗದ ತಾಮ್ರದ ತಂತಿ
- ಪಾರಂಪರಿಕ ಕಟ್ಟಡವಾದ್ದರಿಂದ ದುರಸ್ತಿಗೆ ಪುರಾತತ್ವ ಇಲಾಖೆಗೆ ವಹಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡಿದ್ದು ಪರಿಶೀಲನೆ ನಡೆಸಲಾಗುವುದುಕೆ.ಜೆ.ಸಿಂಧು ಪಾಲಿಕೆ ಉಪ ಆಯುಕ್ತೆ (ಅಭಿವೃದ್ಧಿ)
ಅನುಭವಿಗಳಿಗೆ ಕಾಮಗಾರಿ ವಹಿಸುತ್ತಿಲ್ಲ’ ‘ಪಾಲಿಕೆಯು ದೊಡ್ಡಗಡಿಯಾರ ದುರಸ್ತಿಯನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ನೀಡಿತ್ತು. ಆ ಇಲಾಖೆಯವರು ದುರಸ್ತಿಯನ್ನು ಅನುಭವಿ ಗುತ್ತಿಗೆದಾರರಿಗೆ ವಹಿಸಿಲ್ಲ’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ದೂರಿದರು. ‘ಗಡಿಯಾರದ ಮೇಲ್ಪಾಗದಲ್ಲಿನ ಚೌಕಿಯ ನಾಲ್ಕು ಮೂಲೆಗಳಲ್ಲಿ ಕಿರು ಗೋಪುರಗಳಿದ್ದವು. ಅವುಗಳಲ್ಲಿ ಒಂದು ಉರುಳಿತ್ತು. ದುರಸ್ತಿ ವೇಳೆ ಉಳಿದ ಮೂರನ್ನೂ ಇಲ್ಲವಾಗಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.