ADVERTISEMENT

ರಾಷ್ಟ್ರೀಯ ಲೋಕ ಅದಾಲತ್‌ನ ರಾಜಿ–ಸಂಧಾನ; 18 ದಂಪತಿಗಳ ಪುನರ್ಮಿಲನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 11:39 IST
Last Updated 25 ಜೂನ್ 2022, 11:39 IST
ಎಂ.ಎಲ್. ರಘುನಾಥ್
ಎಂ.ಎಲ್. ರಘುನಾಥ್   

ಮೈಸೂರು: ವಿವಿಧ ಕಾರಣಗಳಿಂದ ಬೇರೆ–ಬೇರೆಯಾಗಿದ್ದ ಆ ದಂಪತಿಗಳು ಮತ್ತೊಮ್ಮೆ ಜೊತೆಯಾದ ಖುಷಿಯಲ್ಲಿದ್ದರು. ಅಕ್ಕಪಕ್ಕ ಕುಳಿತು ಪ್ರೀತಿಯಿಂದ ಮಾತನಾಡಿಕೊಳ್ಳುತ್ತಿದ್ದರು. ಬಂಧುಗಳ ಬಗ್ಗೆ ವಿಚಾರಿಸುತ್ತಿದ್ದರು. ಜೊತೆಗಿದ್ದ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದರು. ಕೂಡಿ ನಡೆಯುವ ಸಂಕಲ್ಪ ಮಾಡಿದ್ದರು.

– ಇದೆಲ್ಲವೂ ಕಂಡುಬಂದಿದ್ದು ಜಯನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ. ವಕೀಲರು, ರಾಜಿ– –ಸಂಧಾನಕಾರರು ಹಾಗೂ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಅದಾಲತ್‌ನಲ್ಲಾದ ತೀರ್ಮಾನದಂತೆ 18 ದಂಪತಿ ತಮ್ಮ ನಡುವಿನ ಕಲಹ ಮರೆತು ಜೊತೆಯಾಗಿ ಬಾಳ್ವೆ ಮಾಡುವುದಕ್ಕೆ ಸಮ್ಮತಿಸಿದರು. ಹೀಗೊಂದು ಪುನರ್ವಮಿಲನಕ್ಕೆ ಕೋರ್ಟ್‌ನ ಸಭಾಂಗಣ ಸಾಕ್ಷಿಯಾಯಿತು. ನ್ಯಾಯಾಧೀಶರು ಹಾಗೂ ವಕೀಲರು ಅವರಿಗೆ ಸಿಹ ತಿನ್ನಿಸಿ ಶುಭ ಹಾರೈಸಿದರು. ಕಹಿ ನೆನಪುಗಳನ್ನು ಮರೆತು, ಭರವಸೆಯ ಹೊಸ ನಾಳೆಗಳನ್ನು ಕಂಡುಕೊಳ್ಳುವಂತೆ ಹರಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಲ್. ರಘುನಾಥ್‌ ಅವರು ದಂಪತಿಗೆ ಸಿಹಿ ವಿತರಿಸಿದರು. ಅದಾಲತ್‌ನಲ್ಲಿ ವಿಲೇವಾರಿಯಾದ ವ್ಯಾಜ್ಯಗಳ ಮಾಹಿತಿಯನ್ನು ಪತ್ರಕರ್ತರಿಗೆ ನೀಡಿದರು.

ADVERTISEMENT

‘ಈ ಬಾರಿಯ ಅದಾಲತ್‌ನಲ್ಲಿ ಕೌಟುಂಬಿಕ ಕಲಹದ ಪ್ರಕರಣಗಳಲ್ಲಿ ಮೈಸೂರಿನ ನ್ಯಾಯಾಲಯಗಳಲ್ಲಿ ಒಟ್ಟು 98 ಪ್ರಕರಣಗಳು ಇತ್ಯರ್ಥಗೊಂಡಿವೆ’ ಎಂದು ಮಾಹಿತಿ ನೀಡಿದರು.

‘ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಕಾನೂನಿ ಪ್ರಕಾರ ರಾಜಿ ಆಗಬಹುದಾದ ಪ್ರಕರಣಗಳನ್ನು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ–ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಈ ವರ್ಷದ 2ನೇ ಬೃಹತ್ ಲೋಕ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ’ ಎಂದು ತಿಳಿಸಿದರು.

‘ನಗರ ಮತ್ತು ತಾಲ್ಲೂಕುಗಳಲ್ಲಿ ಒಟ್ಟು 1,50,633 ಪ್ರಕರಣಗಳು (59,059 ಸಿವಿಲ್ ಹಾಗೂ 91,574 ಕ್ರಿಮಿನಲ್) ವಿಚಾರಣೆ ನಡೆಸಲಾಗಿದೆ. ಇವುಗಳಲ್ಲಿ 52,695 ಪ್ರಕರಣಗಳು ಇತ್ಯರ್ಥವಾಗುವ ಸಾಧ್ಯತೆ ಇದೆ. ವಿಶೇಷವಾಗಿ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ಯರ್ಥವಾಗಿವೆ’ ಎಂದು ವಿವರಿಸಿದರು.

‘ತಂದೆ–ಮಗಳ ನಡುವಿನ ವಿಶೇಷ ಪ್ರಕರಣವನ್ನೂ ಇತ್ಯರ್ಥಗೊಳಿಸಲಾಗಿದೆ. ದೆಹಲಿಯಲ್ಲಿದ್ದ ತಂದೆಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂಪರ್ಕಿಸಿ ರಾಜಿ–ಸಂಧಾನ ಮಾಡಲಾಗಿದೆ. ತಾಯಿ ಸತ್ತ ಬಳಿಕ ತಂದೆಯು ಪುತ್ರಿಯ ಜವಾಬ್ದಾರಿ ಹೊತ್ತರಲಿಲ್ಲ. ಅಜ್ಜಿ ಮನೆಯಲ್ಲಿ ಬಿಟ್ಟು ಹೋಗಿದ್ದರು. ಹೀಗಾಗಿ ತಂದೆಯಿಂದ ಜೀವನಾಂಶ ಕೋರಿ ಮಗಳು ನ್ಯಾಯಾಲಯದ ಮೆಟ್ಟಿಲೇರಿದ್ದಳು. ಈ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ’ ಎಂದರು.

‘ಕಾವೇರಿ ನೀರಾವರಿ ನಿಗಮಕ್ಕೆ ಸಂಬಂಧಿಸಿದ 39ರಲ್ಲಿ 27 ಪ್ರಕರಣಗಳು (₹ 1 ಕೋಟಿ ಮೊತ್ತ) ಇತ್ಯರ್ಥವಾಗಿದೆ. ಮುಡಾಕ್ಕೆ ಸಂಬಂಧಿಸಿದ 198 ವ್ಯಾಜ್ಯಗಳಲ್ಲಿ 38 ಪ್ರಕರಣಗಳು ಇತ್ಯರ್ಥ(₹ 12.50 ಕೋಟಿ)ವಾಗಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.