ADVERTISEMENT

29 ದಂಪತಿ ಒಂದುಗೂಡಿಸಿದ ಲೋಕ್‌ಅದಾಲತ್‌

ಜಿಲ್ಲಾ ನ್ಯಾಯಾಲಯದಲ್ಲಿ 14,237 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 5:04 IST
Last Updated 28 ಮಾರ್ಚ್ 2021, 5:04 IST

ಮೈಸೂರು: ವಿಚ್ಛೇದನ ಬಯಸಿದ್ದ 29 ದಂಪತಿ, ಶನಿವಾರ ಇಲ್ಲಿ ನಡೆದ ‘ಮೆಗಾ ಲೋಕ್‌ಅದಾಲತ್‌’ನಲ್ಲಿ ಮತ್ತೆ ಒಂದಾಗಿದ್ದಾರೆ. ಇವರಲ್ಲಿ 65 ವರ್ಷದ ಹಿರಿಯ ಜೋಡಿ ಸೇರಿರುವುದು ವಿಶೇಷ.

ಐದು ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದವರೂ, ಇದೀಗ ವಿಚ್ಛೇದನ ನಿರ್ಧಾರದಿಂದ ದೂರ ಸರಿದು, ಪರಸ್ಪರ ಒಂದಾಗಿ ಬಾಳ್ವೆ ಮಾಡಲು ಸಮ್ಮತಿ ವ್ಯಕ್ತಪಡಿಸಿದ್ದಾರೆ.‌ ಮದುವೆಯಾಗಿ ಎರಡೇ ತಿಂಗಳಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರೂ ಇವರಲ್ಲಿದ್ದರು.

‘ಇಲ್ಲಿನ ಮೂರು ಕೌಟುಂಬಿಕ ನ್ಯಾಯಾಲಯಗಳಲ್ಲಿ ನಡೆಸಿದ ಆಪ್ತಸಮಾಲೋಚನೆಯ ಬಳಿಕ, 29 ದಂಪತಿ ಒಟ್ಟಿಗೆ ಇರಲು ನಿರ್ಧರಿಸಿದರು. ಇವರಿಗೆ ಸಿಹಿ ತಿನಿಸಿ, ಶುಭ ಹಾರೈಸಿ, ಹೂಗುಚ್ಛ ನೀಡಿ ಕಳುಹಿಸಲಾಯಿತು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ತಿಳಿಸಿದ್ದಾರೆ.

ADVERTISEMENT

2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಾಗಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಸುಮಾರು 60-65 ವಯಸ್ಸಿನ ಗಂಡ ಹೆಂಡತಿಯನ್ನು ಮತ್ತೆ ಒಂದುಗೂಡಿಸಿ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

14,237 ಪ್ರಕರಣ ಇತ್ಯರ್ಥ

ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇದ್ದ 24,583 ಪ್ರಕರಣಗಳಲ್ಲಿ 184 ವ್ಯಾಜ್ಯಪೂರ್ವ ಪ್ರಕರಣಗಳನ್ನು ಒಳಗೊಂಡಂತೆ 14,237 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಮೆಗಾ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

38 ವರ್ಷಗಳಷ್ಟು ಹಳೆಯ ಆಸ್ತಿ ಪಾಲುದಾರಿಕೆ ಪ್ರಕರಣ ಹಾಗೂ 80 ಚೆಕ್‌ಬೌನ್ಸ್‌ ಪ್ರಕರಣಗಳೂ ರಾಜಿಸಂಧಾನದ ಮೂಲಕ ಇತ್ಯರ್ಥವಾಗಿವೆ ಎಂದರು.

ಆಸ್ತಿ ವಿಭಜನೆ ಸಂಬಂಧ ದಾಖಲಾಗಿದ್ದ 1,291 ಪ್ರಕರಣಗಳಲ್ಲಿ 147 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ. ಇದರಲ್ಲಿ 1983ರಲ್ಲಿ ಆಸ್ತಿಪಾಲು ಕೇಳಿ ಹಾಕಿದ ಪ್ರಕರಣ ಇತ್ಯರ್ಥಪಡಿಸಿರುವುದು ವಿಶೇಷ. ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದ ಕಕ್ಷಿದಾರರೊಬ್ಬರು ಖುದ್ದಾಗಿ ಹಾಜರಾಗಿ ಅಲ್ಲಿ ತನ್ನ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

2,306 ಸಿವಿಲ್ ಪ್ರಕರಣಗಳಲ್ಲಿ 243, ಚೆಕ್‌ಬೌನ್ಸ್‌ನ 2,697 ಪ್ರಕರಣಗಳಲ್ಲಿ 312, 1,210 ಕ್ರಿಮಿನಲ್ ಪ್ರಕರಣಗಳ ಪೈಕಿ 491 ಪ್ರಕರಣಗಳು ಬಗೆಹರಿದಿವೆ. ಒಟ್ಟು ₹ 97.35 ಕೋಟಿಯಷ್ಟು ಮೊತ್ತದ ಪ್ರಕರಣಗಳು ರಾಜಿಯಾಗಿವೆ ಎಂದು ಮಾಹಿತಿ ನೀಡಿದರು.

ಪ‍್ರಧಾನ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶರಾದ ರಾಮಚಂದ್ರ ಡಿ ಹುದ್ದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.