ಮೈಸೂರು: ನಗರದಲ್ಲಿ ಸತತ 3ನೇ ದಿನ ಪ್ರವಾಸ ಮುಂದುವರಿಸಿದ ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು, ಶನಿವಾರ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ವೈದ್ಯರಿಗೆ ಹಲವು ಸಲಹೆ–ಸೂಚನೆಗಳನ್ನು ನೀಡಿದರು. ಅವ್ಯವಸ್ಥೆ ತಾಂಡವ ಆಡುತ್ತಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯ ಪ್ರತಿ ವಾರ್ಡ್‌ಗೂ ತೆರಳಿ ರೋಗಿಗಳನ್ನು ಮಾತನಾಡಿಸಿದ ಅವರು, ‘ಸರಿಯಾಗಿ ಚಿಕಿತ್ಸೆ ದೊರೆಯುತ್ತಿದೆಯೇ, ಶೌಚಾಲಯ, ಊಟದ ವ್ಯವಸ್ಥೆ ಸರಿಯಾಗಿದೆಯೇ? ಎಕ್ಸರೇ, ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಮೊದಲಾದ ಸೌಲಭ್ಯಗಳು ಇವೆಯೇ?’ ಎಂದು ಮಾಹಿತಿ ಪಡೆದರು.
‘ವೈದ್ಯರು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಜೊತೆಗೆ ಸೌಜನ್ಯಯುತವಾಗಿ ವರ್ತಿಸಬೇಕು’ ಎಂದು ಸೂಚಿಸಿದರು.
ರೋಗಿಗಳಿಂದ ಹಲವು ದೂರುಗಳು ಬಂದವು. ಹಣಕ್ಕೆ ಬೇಡಿಕೆ ಇಡುವುದು ತಿಳಿದುಬಂದಿತು. ಸ್ವಚ್ಛತೆಲ್ಲಿ ಲೋಪ, ‘ಡಿ’ ಗ್ರೂಪ್ ಸಿಬ್ಬಂದಿ ಕೊರತೆ ಮೊದಲಾದ ಸಮಸ್ಯೆಗಳನ್ನು ಗುರುತಿಸಿದರು.
‘ಚಿಕಿತ್ಸೆಗಾಗಿ ರೋಗಿಗಳಿಂದ ದುಡ್ಡು ಸ್ವೀಕರಿಸಿದರೆ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ರೋಗಿಗಳು–ಅವರ ಬಂಧುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ನಿರ್ದೇಶನ ನೀಡಿದರು.
ಆಸ್ಪತ್ರೆಯೊಳಗೆ ಬೀದಿನಾಯಿಗಳು ಇರುವುದನ್ನು ಕಂಡು ಸಿಟ್ಟಾದ ಅವರು, ಇಂಥದ್ದನ್ನೆಲ್ಲಾ ನಿಯಂತ್ರಿಸಬೇಕು ಎಂದು ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳು ಗಮನಕ್ಕೆ ಬಂದಿವೆ. ಸಿಬ್ಬಂದಿಯು ರೋಗಿಗಳಿಂದ ಹಣಕ್ಕೆ ಬೇಡಿಕೆ ಇಡುವ ಬಗ್ಗೆಯೂ ದೂರುಗಳು ಕೇಳಿಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಫಣೀಂದ್ರ ಹೇಳಿದರು.
ಎಂಎಂಸಿಆರ್‌ಐ ನಿರ್ದೇಶಕಿ ದಾಕ್ಷಾಯಿಣಿ, ಜಿಲ್ಲಾಧಿಕಾರಿ ಜಿ.ಲಕ್ಷೀಕಾಂತ ರೆಡ್ಡಿ, ಜಿ.ಪಂ. ಸಿಇಒ ಎಸ್.ಯುಕೇಶ್ ಕುಮಾರ್, ಕೆ.ಆರ್.ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ (ಆರ್‌ಎಂಒ) ಡಾ.ನಯಾಜ್ ಪಾಷಾ ಉಪಸ್ಥಿತರಿದ್ದರು.
ಅಧಿಕಾರಿಗಳು ಜನರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಬೇಕು. ಕಾನೂನಾತ್ಮಕವಾಗಿ ಮಾಡಬೇಕಾದ ಕೆಲಸದಲ್ಲಿ ವಿಳಂಬ ಸಲ್ಲದುಕೆ.ಎನ್. ಫಣೀಂದ್ರ ಉಪ ಲೋಕಾಯುಕ್ತ
ನಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ದೂರರ್ಜಿಗಳ ವಿಚಾರಣೆಯನ್ನು ಮುಂದುವರಿಸಿದ ಅವರು ‘ಸಾರ್ವಜನಿಕರ ಕೆಲಸಗಳನ್ನು ಕಾನೂನಿನಡಿಯಲ್ಲಿ ನಿಗದಿತ ಅವಧಿಯೊಳಗೆ ಮಾಡಿಕೊಡಬೇಕು. ಜನರನ್ನು ಕಚೇರಿಗೆ ಅಲೆಸಬಾರದು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಉದ್ಯಾನ ಸಿಎ ನಿವೇಶನಕ್ಕೆ ಮೀಸಲಿರಿಸಿದ್ದ ಜಾಗವನ್ನು ಪರಿವರ್ತಿಸಿ ಮಾರಿರುವ ಕನಕ ಗೃಹ ನಿರ್ಮಾಣ ಸಹಕಾರ ಸಂಘದ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಹೈಕೋರ್ಟ್‌ನಲ್ಲಿ ಅನುಮತಿ ಪಡೆದು ಉಳಿದ ನಿವೇಶನವನ್ನು ಸ್ವಾಧೀನಪಡಿಸಿಕೊಂಡು ಉದ್ಯಾನ ರಚನೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು. ‘ಅನಧಿಕೃತ ಬಡಾವಣೆಗಳನ್ನು ರಚಿಸಿ ನಿವೇಶನ ಮಾರಿ ಕೋಟ್ಯಂತರ ರೂಪಾಯಿ ಮಾಡುವುದು ಕಂಡುಬರುತ್ತಿದೆ. ಖರೀದಿಸಿದವರು ಹಣ ಕಳೆದುಕೊಳ್ಳುತ್ತಾರೆ. ಪಾರ್ಕ್ ಜಾಗ ಮಾರಿದ್ದು ಸರಿಯಲ್ಲ. ಮೂಲ ನಕ್ಷೆಯನ್ನು ಪರಿಗಣಿಸಬೇಕು. ನಿವಾಸಿಗಳಿಗೆ ನಾಗರಿಕ ಸೌಕರ್ಯ ಕಲ್ಪಿಸಬೇಕು’ ಎಂದು ತಾಕೀತು ಮಾಡಿದರು.
ಅರ್ಜಿಯೊಂದರ ವಿಚಾರಣೆ ವೇಳೆ ‘ಸರ್ಕಾರಿ ಆಸ್ತಿ ರಕ್ಷಣೆ ನಿಮ್ಮ ಕರ್ತವ್ಯ. ಒತ್ತುವರಿಯಾಗಿದ್ದರೆ ಕೂಡಲೇ ತೆರವುಗೊಳಿಸಬೇಕು. ಇದಕ್ಕೂ ನಾಗರಿಕರು ಅರ್ಜಿ ಸಲ್ಲಿಸಬೇಕಾ ಇದು ಅಧಿಕಾರಿಗಳ ಕೆಲಸವಲ್ಲವೇ?’ ಎಂದು ಕೇಳಿದರು. ಲೋಕಾಯುಕ್ತ ಜಂಟಿ ನಿಬಂಧಕಿ (ವಿಚಾರಣೆ) ವಿ.ಎನ್.ವಿಮಲಾ ಲೋಕಾಯುಕ್ತ ಕಾರ್ಯದರ್ಶಿ ಕಿರಣ್ ಪಾಟೀಲ್ ಡಿಸಿಪಿ ಬಿಂದುಮಣಿ ಎಸ್‌ಪಿ ಎನ್.ವಿಷ್ಣುವರ್ಧನ್ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.