ಮೈಸೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕಬಿನಿ ಜಲಾಶಯದ ಸೂಪರಿಂಟೆಂಡೆಂಟ್ ಎಂಜಿನಿಯರ್ ಕೆ.ಮಹೇಶ್ ಹಾಗೂ ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆಯ ನಿವೃತ್ತ ಇಇ ಎಸ್.ಶಿವರಾಜು ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಇಬ್ಬರೂ ಇಲ್ಲಿನ ಚಾಮುಂಡಿ ಬೆಟ್ಟದ ರಸ್ತೆಯ ಕೆಂಪಚಲುವಮ್ಮಣ್ಣಿ ನಗರದ ನಿವಾಸಿಗಳಾಗಿದ್ದು, ಮನೆಯ ಆಸ್ತಿ ದಾಖಲೆಗಳ ಪರಿಶೀಲನೆ ನಡೆಸಿ, ₹10.3 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.
ಕೆ.ಮಹೇಶ್ ಅವರ ಬಳಿ ₹2.75 ಕೋಟಿ ಮೌಲ್ಯದ 3 ಮನೆ, 3 ನಿವೇಶನ ಹಾಗೂ 11 ಎಕರೆ 20 ಗುಂಟೆ ಕೃಷಿ ಭೂಮಿಯಿದೆ. ₹50 ಲಕ್ಷ ಚರಾಸ್ತಿಯಿದ್ದು, 338 ಗ್ರಾಂ ಚಿನ್ನ, 2.9 ಕೆ.ಜಿ ಬೆಳ್ಳಿ, ₹4 ಲಕ್ಷ ಮೌಲ್ಯದ ಕಾರು, 2 ಬೈಕ್‌ಗಳಿವೆ.
ಎಸ್.ಶಿವರಾಜು ಅವರಿಗೆ ಸಂಬಂಧಿಸಿದ ಆರು ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ₹87.89 ಲಕ್ಷ ಮೌಲ್ಯದ 3 ನಿವೇಶನಗಳು, ₹1.10 ಕೋಟಿ ಮೌಲ್ಯದ 3 ಮನೆಗಳು ಹಾಗೂ ₹93 ಲಕ್ಷ ಮೌಲ್ಯದ 10 ಎಕರೆ ಕೃಷಿ ಭೂಮಿ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.
₹3.05 ಕೋಟಿ ಮೌಲ್ಯದ ಚರಾಸ್ತಿಯಿದ್ದು, ₹8 ಲಕ್ಷ ಮೌಲ್ಯದ 1 ಕೆ.ಜಿ ಬೆಳ್ಳಿ ಇದೆ. ₹6 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ₹90 ಲಕ್ಷ ಮೌಲ್ಯದ 2 ಟ್ರಾಕ್ಟರ್, 3 ಕಾರು, ಒಂದು ಜೆಸಿಬಿ ಹಾಗೂ ಹಿಟಾಚಿ ಹಾಗೂ 2 ಬೈಕ್‌ಗಳಿವೆ. ಇದಲ್ಲದೆ ₹2.06 ಕೋಟಿ ಮೌಲ್ಯದ ಕ್ರಶರ್, ಕ್ವಾರಿಗಳಿರುವ ದಾಖಲೆಗಳು ಸಿಕ್ಕಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪ್ರಭಾರ ಎಸ್‌ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೃಷ್ಣಯ್ಯ, ಇನ್‌ಸ್ಪೆಕ್ಟರ್‌ಗಳಾದ ಜಯರತ್ನ, ಲೋಕೇಶ್, ರವಿಕುಮಾರ್, ಸಿಬ್ಬಂದಿ ವೀರಭದ್ರ ಸ್ವಾಮಿ, ಪ್ರಕಾಶ್, ಗೋಪಿ, ತ್ರಿವೇಣಿ, ಮೋಹನ್ ಗೌಡ, ಮೋಹನ್ ಕುಮಾರ್, ದಿನೇಶ್, ಸುಂದ್ರೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.