ADVERTISEMENT

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಶಿವನಾಮ ಸ್ಮರಣೆ

ಎಲ್ಲೆಡೆ ಶಿವರಾತ್ರಿ ಆಚರಣೆ, ದೇಗುಲಗಳು, ಮಠಗಳಲ್ಲಿ ಜಾಗರಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 14:22 IST
Last Updated 11 ಮಾರ್ಚ್ 2021, 14:22 IST
ಮೈಸೂರಿನ ರಾಮಾನುಜರಸ್ತೆಯ ಗುರುಕುಲದ ನೂರೆಂಟು ಶಿವಲಿಂಗಗಳ ದೇವಾಲಯದಲ್ಲಿ ಗುರುವಾರ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು
ಮೈಸೂರಿನ ರಾಮಾನುಜರಸ್ತೆಯ ಗುರುಕುಲದ ನೂರೆಂಟು ಶಿವಲಿಂಗಗಳ ದೇವಾಲಯದಲ್ಲಿ ಗುರುವಾರ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು   

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ಎಲ್ಲೆಡೆ ಶಿವರಾತ್ರಿ ಆಚರಣೆ ನಡೆಯಿತು. ಶಿವದೇಗುಲಗಳಲ್ಲಿ ಭಕ್ತರು ಕಿಕ್ಕಿರಿದು ಸೇರಿದ್ದರು. ಹಲವೆಡೆ ವಿಶೇಷ ಕಾರ್ಯಕ್ರಮಗಳು ನೆರವೇರಿದವು.

ತ್ರಿನೇಶ್ವರ ಸ್ವಾಮಿ ದೇಗುಲದಲ್ಲಿನ ಶಿವಲಿಂಗಕ್ಕೆ 11 ಕೆ.ಜಿಗೆ ತೂಕದ ಚಿನ್ನದ ಕೊಳಗವನ್ನು (ಶಿವನ ಮುಖವಾಡ) ಧಾರಣೆ ಮಾಡಲಾಗಿತ್ತು. ವಿವಿಧ ಬಗೆಯ ಹೂಗಳಿಂದಲೂ ಸಿಂಗಾರಗೊಂಡಿದ್ದ ಶಿವಲಿಂಗದ ದರ್ಶನಕ್ಕೆ ಭಕ್ತರು ಮುಗಿಬಿದ್ದರು. ಮುಂಜಾನೆಯಿಂದ ಆರಂಭವಾದ ದರ್ಶನ ರಾತ್ರಿಯವರೆಗೂ ನಡೆದಿತ್ತು.

ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದ ಶಾಖಾ ಮಠ, ಹೊಸಮಠ, ಕುದೇರುಮಠ ಸೇರಿದಂತೆ ನಗರದ ಹಲವು ಮಠಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಭಕ್ತರು ಶಿವಲಿಂಗಪೂಜೆ ಮಾಡಿದರು. ವಿಶೇಷ ಭಜನೆ, ಭಕ್ತಿಗೀತೆಗಳ ಗಾಯನ ಕಾರ್ಯಕ್ರಮಗಳನ್ನು ಅಹೋರಾತ್ರಿ ನಡೆಸಲಾಯಿತು.

ADVERTISEMENT

ಅಗ್ರಹಾರದ ರಾಮಾನುಜ ರಸ್ತೆಯ ಕಾಮೇಶ್ವರ, ಕಾಮೇಶ್ವರಿ ದೇಗುಲವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಬೆಳಿಗ್ಗೆ 10ರಿಂದ ಆರಂಭವಾದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶುಕ್ರವಾರ ನಸುಕಿನವರೆಗೂ ನಡೆಯಿತು. ವಿವಿಧ ಭಜನಾ ಮಂಡಳಿಗಳ ಸದಸ್ಯರು ಭಜನೆ ಮಾಡುವ ಮೂಲಕ ಭಕ್ತವೃಂದವನ್ನು ಮನಸೂರೆಗೊಂಡರು.

ಇದರ ಎದುರು ಇರುವ ಗುರುಕುಲದ ನೂರೆಂಟು ಶಿವಲಿಂಗ ದೇವಾಲಯದ ಆವರಣದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ, ಭಕ್ತರ ಸರತಿ ಸಾಲಿಗೆ ವ್ಯವಸ್ಥೆ ಮಾಡಲಾಗಿತ್ತು. ಒಂದು ಬಸ್‌ನಲ್ಲಿ ಬಂದ ಪೊಲೀಸರು ರಾಮಾನುಜ ರಸ್ತೆಯ ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸಪಟ್ಟರು.‌

ಇಡೀ ರಸ್ತೆಯಲ್ಲಿ ವಾಹನಗಳು ತುಂಬಿ ಹೋಗಿದ್ದವು. ಸಂಜೆಯ ನಂತರ ವಾಹನದ ಓಡಾಟಕ್ಕೆ ದೇಗುಲದ ಆವರಣದಲ್ಲಿ ಕಡಿವಾಣ ಹಾಕಲಾಯಿತು. ಸರತಿ ಸಾಲಿನಲ್ಲಿ ನಿಂತ ನಗರದ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ನೂರೆಂಟು ಶಿವಲಿಂಗಗಳ ದರ್ಶನ ಪಡೆದರು. ಆವರಣದಲ್ಲಿ ಮೂಟೆಗಟ್ಟಲೆ ಬಿಲ್ಪಪತ್ರೆಗಳನ್ನು ಹರಡಿಕೊಂಡು ಭಕ್ತರಿಗೆ ಮಾರಾಟ ಮಾಡಿದರು.‌

ಮಾತೃಮಂಡಲಿ ವೃತ್ತದಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಅಶೋಕ ರಸ್ತೆಯ ಮುಕ್ಕಣ್ಣೇಶ್ವರ ಸ್ವಾಮಿ ದೇವಸ್ಥಾನ, ಚಾಮರಾಜಪುರಂನ ಪ್ರಸನ್ನವಿಶ್ವೇಶ್ವರಸ್ವಾಮಿ ದೇಗುಲ, ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನ, ಬೋಗಾದಿ ರಿಂಗ್ ರಸ್ತೆಯಲ್ಲಿರುವ ನಾಗೇಶ್ವರ ಭೋಗೇಶ್ವರಸ್ವಾಮಿ ದೇವಾಲಯ, ಲಷ್ಕರ್‌ಮೊಹಲ್ಲಾದ ಗರಡಿಕೇರಿ, ಕುಂಬಾರಕೊಪ್ಪಲು, ಸಿದ್ದಪ್ಪ ಚೌಕ, ಹೊಸಕೇರಿ, ಮಲೆಮಹದೇಶ್ವರ ರಸ್ತೆ ಹಾಗೂ ಇತರೆಡೆ ಇರುವ ಮಹದೇಶ್ವರ ದೇವಾಲಯಗಳಲ್ಲಿಯೂ ಶಿವರಾತ್ರಿ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯೋಪಾದಿಯಲ್ಲಿ ಸೇರಿದ್ದರು.

ಯಾದವಗಿರಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾ ಲಯದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪ್ರತಿಕೃತಿಗಳನ್ನು ತಡರಾತ್ರಿಯವರೆಗೂ ಭಕ್ತರು ಕಣ್ತುಂಬಿಕೊಂಡರು. ಆಲನಹಳ್ಳಿ ಆಶ್ರಮದ ವತಿಯಿಂದ ಇಲ್ಲಿನ ಲಲಿತಮಹಲ್‌ ಮೈದಾನದಲ್ಲಿ ನಡೆಯುತ್ತಿರುವ 21 ಅಡಿ ಎತ್ತರದ ತೆಂಗಿನಕಾಯಿ ಶಿವಲಿಂಗವನ್ನೂ ನೂರಾರು ಮಂದಿ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.