ADVERTISEMENT

ಅ.15ರಂದು ಮಹಿಷ ದಸರಾ ಆಚರಣೆ

ಕೋವಿಡ್‌ ಮಾರ್ಗಸೂಚಿಯಂತೆ ಸರಳ ಕಾರ್ಯಕ್ರಮ: ಪುರುಷೋತ್ತಮ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 8:48 IST
Last Updated 12 ಅಕ್ಟೋಬರ್ 2020, 8:48 IST

ಮೈಸೂರು: ಪ್ರತಿವರ್ಷದಂತೆ ಈ ಬಾರಿಯೂ ಮಹಿಷ ದಸರಾ ಆಚ ರಣೆ ನಡೆಯಲಿದೆ. ಅ.15 ರಂದು ಚಾಮುಂಡಿಬೆಟ್ಟದಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಮೇಯರ್‌ ಪುರುಷೋತ್ತಮ ತಿಳಿಸಿದರು.

‘ಮರೆತು ಹೋದ ಮೈಸೂರಿನ ಪ್ರಾಚೀನ ಅಸ್ಮಿತೆಯನ್ನು ಸ್ಮರಿಸಲು ‘ಮಹಿಷ ದಸರಾ’ ಆಚರಿಸಲಾಗುತ್ತದೆ. ದಸರಾ ಆಚರಣೆಯ ಅನುಮತಿಗಾಗಿ ಜಿಲ್ಲಾಧಿಕಾರಿಗೆ ಎರಡು ಬಾರಿ ಮನವಿ ಮಾಡಲಾಗಿದೆ. ಅನುಮತಿಗೆ ಮಂಗಳವಾರದವರೆಗೂ ಕಾಯುತ್ತೇವೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾಡಳಿತದ ಅನುಮತಿ ಸಿಗುವ ವಿಶ್ವಾಸವಿದೆ. ಕಾನೂನು ಉಲ್ಲಂಘಿಸದೆ, ಕೋವಿಡ್‌ –19 ಮಾರ್ಗಸೂಚಿಗಳನ್ನು ಪಾಲಿಸಿಕೊಂಡೇ ಆಚರಣೆ ನಡೆಯಲಿದೆ. ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ
ಅಂದು ಬೆಳಿಗ್ಗೆ 11ಕ್ಕೆ ಚಾಮುಂಡಿಬೆಟ್ಟದಲ್ಲಿರುವ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುವುದು. ಸಾಹಿತಿಗಳು, ಪ್ರಗತಿಪರ ಚಿಂತಕರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ADVERTISEMENT

ಈ ಬಾರಿ ಯಾವುದೇ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಜಿಲ್ಲಾಡಳಿತ ಎಷ್ಟು ಜನರಿಗೆ ಅನುಮತಿ ನೀಡುವಷ್ಟೇ ಮಂದಿಯೊಂದಿಗೆ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್‌ ಮಾತನಾಡಿ, ಮಹಿಷ ಯಾವ ರೀತಿಯಲ್ಲೂ ಕೆಟ್ಟ ವ್ಯಕ್ತಿಯಾಗಿರಲಿಲ್ಲ, ಅವನೊಬ್ಬ ಆದರ್ಶ ವ್ಯಕ್ತಿ. ಆದರ್ಶ ಪುರುಷ ಆಗಿದ್ದರಿಂದಲೇ ಈ ಪ್ರದೇಶಕ್ಕೆ ಮಹಿಷ ಮಂಡಲ ಎಂದು ಹೆಸರಿಡಲಾಯಿತು. ಆ ಬಳಿಕ ಮಹಿಷಪುರ ಹಾಗೂ ಮೈಸೂರು ಆಗಿ ಬದಲಾಯಿತು ಎಂದರು.

ಯಾರಾದರೂ ಕೆಟ್ಟ ವ್ಯಕ್ತಿಯ ಹೆಸರನ್ನು ಒಂದು ಪ್ರದೇಶಕ್ಕೆ ಇಟ್ಟಿರುವ ಉದಾಹರಣೆ ಇದೆಯೇ? ಮಹಿಷ ಒಬ್ಬ ಒಬ್ಬ ಆದರ್ಶ ದೊರೆ ಆಗಿದ್ದ. ಬೌದ್ಧ ಧರ್ಮದ ಅನುಯಾಯಿ ಆಗಿದ್ದ. ಆದರೆ, ಕೆಲವರು ರಾಕ್ಷಸನನ್ನಾಗಿ
ಚಿತ್ರಿಸಿ ತಪ್ಪಾಗಿ ವ್ಯಾಖ್ಯಾನ ಮಾಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದೂ ಎಂಬುದು ಧರ್ಮವೇ ಅಲ್ಲ. ಹಿಂದೂ ಎಂದರೆ ಬ್ರಾಹ್ಮಣರು ಎಂದರ್ಥ. ಉಳಿದವರೆಲ್ಲರೂ ಶೂದ್ರರು. ಪರ್ಷಿಯನ್ ದೇಶದ ಸಾಹಿತಿಯೊಬ್ಬರು ಸಿಂಧೂ ನದಿಯನ್ನು ಹಿಂದೂ ಎಂದು ಕರೆದರು. ಪರ್ಷಿಯನ್ನರು ಬಳಸಿದ ಪದವನ್ನುತಮ್ಮಧರ್ಮದ ಹೆಸರಿಗೆ ಬಳಸಿಕೊಂಡಿದ್ದೀರಿ. ವೇದ, ಪುರಾಣದಲ್ಲಿ ಎಲ್ಲಿಯೂ ಹಿಂದೂ ಎಂಬ ಪದ ಬಳಕೆಯಾಗಿಲ್ಲ’ ಎಂದು ನುಡಿದರು.

ಲೇಖಕ ಸಿದ್ದಸ್ವಾಮಿ, ಮಲೆಯೂರು ಗುರುಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.