ADVERTISEMENT

ಕೆ.ಆರ್‌.ಆಸ್ಪತ್ರೆಗೆ ‘ಮೇಜರ್‌ ಸರ್ಜರಿ’

ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧ: ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 4:13 IST
Last Updated 8 ಆಗಸ್ಟ್ 2021, 4:13 IST
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿದರು. ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಸಾ.ರಾ.ಮಹೇಶ್, ಎಚ್‌.ಪಿ.ಮಂಜುನಾಥ್ ಇದ್ದಾರೆ
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿದರು. ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಸಾ.ರಾ.ಮಹೇಶ್, ಎಚ್‌.ಪಿ.ಮಂಜುನಾಥ್ ಇದ್ದಾರೆ   

ಮೈಸೂರು: ‘ಕೆ.ಆರ್‌.ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಬಗೆಹರಿಯದೇ ಉಳಿದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಿನ ದಿನಗಳಲ್ಲಿ ಮೇಜರ್‌ ಸರ್ಜರಿ ನಡೆಸಲಾಗುವುದು’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಕೋವಿಡ್‌ ನಿರ್ವಹಣೆ ಮತ್ತು ನೆರೆ ಪರಿಸ್ಥಿತಿ ಬಗ್ಗೆ ಚರ್ಚಿಸಲು ಶನಿವಾರ ಆಯೋಜಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಅದಕ್ಕೂ ಮುನ್ನ, ಶಾಸಕರಾದ ಎಲ್‌.ನಾಗೇಂದ್ರ ಮತ್ತು ಸಾ.ರಾ.ಮಹೇಶ್‌ ಅವರು ಮೈಸೂರಿನ ‘ದೊಡ್ಡಾಸ್ಪತ್ರೆ’ಯ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ’ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ADVERTISEMENT

‘ವೈದ್ಯರು, ಸಹಾಯಕ ಸಿಬ್ಬಂದಿಯ ಕೊರತೆಯಿದ್ದು, ರೋಗಿಗಳು ಪರದಾಡುವಂತಾಗಿದೆ. ಕೆಲ ದಿನಗಳ ಹಿಂದೆ ಬುದ್ಧಿಮಾಂದ್ಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ಅದಾದ ಬಳಿಕವೂ ಆಸ್ಪತ್ರೆಯ ಆಡಳಿತ ಎಚ್ಚೆತ್ತುಕೊಂಡಿಲ್ಲ. ಅ ಘಟನೆಯ ಬಳಿಕ ಹೊಸದಾಗಿ ಎಷ್ಟು ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದೀರಿ’ ಎಂದು ನಾಗೇಂದ್ರ, ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ (ಎಂಎಂಸಿಆರ್‌ಐ) ಡೀನ್‌ ಡಾ.ಸಿ.ಪಿ.ನಂಜರಾಜ್ ಅವರನ್ನು ಪ್ರಶ್ನಿಸಿದರು.

‘1,041 ಹಾಸಿಗೆ ಸೌಲಭ್ಯ ಇರುವ ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಮುಚ್ಚಬೇಕು. ಸರ್ಕಾರ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಹಣ ಕೊಡುತ್ತದೆ. ಆದರೆ ಇರುವ ಆಸ್ಪತ್ರೆಯ ನವೀಕರಣಕ್ಕೆ ಏಕೆ ಅಸಡ್ಡೆ’ ಎಂದು ಕಿಡಿಕಾರಿದರು.

ಅವರಿಗೆ ಪ್ರತಿಕ್ರಿಯಿಸಿದ ಡಾ.ಸಿ.ಪಿ.ನಂಜರಾಜ್, ‘ಆಸ್ಪತ್ರೆಗೆ ಬೇಕಿರುವ ವೈದ್ಯಕೀಯ ಸಲಕರಣೆಗಳು ಮತ್ತು ಅಗತ್ಯವಿರುವ ಸಿಬ್ಬಂದಿಯ ಪಟ್ಟಿಯನ್ನು ಸರ್ಕಾರಕ್ಕೆ ಕೊಟ್ಟಿದ್ದೇವೆ. ಉತ್ತರ ಬಂದಿಲ್ಲ. ಕೆಲವು ವಿಭಾಗಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬಾರದು ಎಂಬ ಸೂಚನೆ ಬಂದಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಆಗ ಮಧ್ಯಪ್ರವೇಶಿಸಿದ ಸಚಿವರು, ‘ನಿಮಗೆ ಎಷ್ಟು ದಾದಿಯರು ಮತ್ತು ವೈದ್ಯರ ಅಗತ್ಯವಿದೆ, ಸರ್ಕಾರದಿಂದ ಏನೆಲ್ಲಾ ನೆರವು ಬೇಕು ಎಂಬುದರ ಪಟ್ಟಿ ಕೊಡಿ. ಎಲ್ಲವನ್ನೂ ದೊರಕಿಸಿಕೊಡಲಾಗುವುದು. ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ಒಂದು ವಾರ ಕಾಲಾವಕಾಶ ಕೊಡಿ. ಆರೋಗ್ಯ ಸಚಿವರ ಜತೆ ಪ್ರತ್ಯೇಕ ಸಭೆ ನಡೆಸಲಾಗುವುದು. ಕೆ.ಆರ್‌. ಆಸ್ಪತ್ರೆಯ ಸಮಸ್ಯೆಗಳನ್ನು ಬಗೆಹರಿಸಲು ಮೇಜರ್‌ ಆಪರೇಷನ್‌ ಮಾಡುತ್ತೇನೆ’ ಎಂದರು.

ಮೂರನೇ ಅಲೆಗೆ ಸಿದ್ಧತೆ: ಡಿಎಚ್‌ಒ ಡಾ.ಕೆ.ಎಚ್‌.ಪ್ರಸಾದ್ ಮಾತನಾಡಿ, ‘ಸಂಭಾವ್ಯ ಮೂರನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಎಲ್ಲ ಸಿದ್ಧತೆ ನಡೆಸಿದೆ. ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಕೆ ಕೊಟ್ಟಿರುವುದರಿಂದ ಮಕ್ಕಳಿಗಾಗಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡಲಾಗಿದೆ’ ಎಂದರು.

‘ನಿತ್ಯ 5 ಸಾವಿರ ಪ್ರಕರಣಗಳು ವರದಿಯಾದರೂ ನಿಭಾಯಿಸುವಷ್ಟು ಸಾಮಾನ್ಯ ಹಾಸಿಗೆ, ಆಮ್ಲಜನಕ ಸೌಲಭ್ಯದ ಹಾಸಿಗೆ ಹಾಗೂ ವೆಂಟಿಲೇಟರ್‌ ಸೌಲಭ್ಯ ಸಜ್ಜಾಗಿದೆ. ಐದು ಸಾವಿರ ಪ್ರಕರಣಗಳು ವರದಿಯಾದಾಗ ಮಕ್ಕಳಿಗೆ 300 ಹಾಸಿಗೆಗಳ ಅಗತ್ಯತೆ ಬರಬಹುದು ಎಂದು ಅಂದಾಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಮುಂಜಾಗ್ರತಾ ಕ್ರಮ: ಸಭೆಯ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸಚಿವ ಸೋಮಶೇಖರ್, ‘ಮೂರನೇ ಅಲೆ ಬಂದರೂ ಅದನ್ನು ಎದುರಿಸಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾರೂ ಹೆದರಬೇಕಾಗಿಲ್ಲ. ಚೆಲುವಾಂಬ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮಕ್ಕಳಿಗಾಗಿ ಮೀಸಲಿಡಲಾಗಿದೆ’ ಎಂದರು.

ಶಾಸಕರಾದ ಎಚ್‌.ಪಿ.ಮಂಜುನಾಥ್, ಬಿ.ಹರ್ಷವರ್ಧನ್, ಸಂದೇಶ್‌ ನಾಗರಾಜು, ಹಂಗಾಮಿ ಮೇಯರ್‌ ಅನ್ವರ್‌ ಬೇಗ್, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್‌ಪಿ ಆರ್‌.ಚೇತನ್, ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್‌ ರೆಡ್ಡಿ ಪಾಲ್ಗೊಂಡಿದ್ದರು.

ಸಿಎಸ್‌ಆರ್‌ ನಿಧಿ ಉಪಕರಣ ಅಧಿಕಾರಿ ಮನೆಗೆ; ಸಾ.ರಾ.ಮಹೇಶ್‌ ಆರೋಪ
‘ಆರ್‌ಬಿಐ ನೋಟು ಮುದ್ರಣ ಸಂಸ್ಥೆಯು ಕೋವಿಡ್‌ ನಿರ್ವಹಣೆ ಉದ್ದೇಶದಿಂದ ಸಿಎಸ್‌ಆರ್‌ ನಿಧಿಯಿಂದ ನೀಡಿದ್ದ ಉಪಕರಣವೊಂದು ಈ ಹಿಂದೆ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರ ಮನೆ ಸೇರಿದ್ದು, ದುರುಪಯೋಗ ಆಗಿದೆ’ ಎಂದು ಶಾಸಕ ಸಾ.ರಾ.ಮಹೇಶ್‌ ಆರೋಪಿಸಿದರು.

‘₹ 2 ಲಕ್ಷ ಹಾಗೂ ₹ 3.98 ಲಕ್ಷ ಮೌಲ್ಯದ ಉಪಕರಣಗಳು ಜಿಲ್ಲಾಸ್ಪತ್ರೆಯ ಹೆಸರಿಗೆ ಬಂದಿದ್ದು, ಅಲ್ಲಿ ಸ್ವೀಕೃತವಾಗಿಲ್ಲ. ಅದು ಅಧಿಕಾರಿಯ ಮನೆಗೆ ಹೋಗಿರುವ ಬಗ್ಗೆ ನನ್ನ ಬಳಿ ದಾಖಲೆಯಿದೆ. ಈ ಕುರಿತಂತೆ ನಾನು ಬರೆದಿರುವ ಪತ್ರಕ್ಕೆ ಸ್ಪಷ್ಟ ಉತ್ತರ ಏಕೆ ನೀಡಿಲ್ಲ’ ಎಂದು ಜಿಲ್ಲಾ ಸರ್ಜನ್‌ ಡಾ.ರಾಜೇಶ್ವರಿ ಅವರನ್ನು ಪ್ರಶ್ನಿಸಿದರು.

‘ಜಿಲ್ಲಾಸ್ಪತ್ರೆಗೆ ಆ ಉಪಕರಣಗಳ ಅಗತ್ಯತೆ ಇಲ್ಲ ಎಂಬುದನ್ನು ನೋಟು ಮುದ್ರಣ ಸಂಸ್ಥೆಗೆ ತಿಳಿಸಿದ್ದೇನೆ. ಜಿಲ್ಲಾಡಳಿತಕ್ಕೂ ಮಾಹಿತಿ ನೀಡಿದ್ದೇನೆ’ ಎಂದು ರಾಜೇಶ್ವರಿ ಉತ್ತರಿಸಿದರು.‌

ಇದಕ್ಕೆ ಸಮಾಧಾನಗೊಳ್ಳದ ಸಚಿವ ಎಸ್‌.ಟಿ.ಸೋಮಶೇಖರ್, ‘ಶಾಸಕರು ಹೇಳುವುದನ್ನು ಗಮನವಿಟ್ಟು ಕೇಳಿ. ಆ ಬಳಿಕ ಉತ್ತರಿಸಿ. ಆ ಉಪಕರಣ ಎಲ್ಲಿಗೆ ಹೋಗಿದೆ ಎಂಬುದನ್ನು ದಾಖಲೆಗಳನ್ನು ಪರಿಶೀಲಿಸಿ ವರದಿ ಕೊಡಿ’ ಎಂದು ಹೇಳಿದರು.

ಸಭೆಯ ಬಳಿಕ ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು, ‘ಸಾ.ರಾ.ಮಹೇಶ್‌ ಮಾಡಿರುವ ಆರೋಪದ ಬಗ್ಗೆ ಪರಿಶೀಲನೆ ನಡೆಸಿ ಕ್ರಮವಹಿಸಲಾಗುವುದು. ಕೋವಿಡ್‌ ನಿರ್ವಹಣೆಗೆ ಹಲವು ಸಂಸ್ಥೆಗಳು ಸಿಎಸ್‌ಆರ್‌ ನಿಧಿಯಿಂದ ನೆರವು ನೀಡಿವೆ. ಅವು ದುರುಪಯೋಗ ಆಗಿಲ್ಲ. ಯಾವುದೋ ಒಂದು ಪ್ರಕರಣದಲ್ಲಿ ಈ ರೀತಿ ಗೊಂದಲ ಆಗಿದೆ. ಅದನ್ನೇ ದೊಡ್ಡದಾಗಿ ಬಿಂಬಿಸಿ ತಪ್ಪು ಸಂದೇಶ ನೀಡಬಾರದು’ ಎಂದರು.

‘ಕೋವಿಡ್‌ ಸಾವು; ಲೆಕ್ಕ ಸರಿಪಡಿಸಿ’: ‘ಜಿಲ್ಲೆಯಲ್ಲಿ ಕೋವಿಡ್‌ ಸಾವಿನ ಲೆಕ್ಕವನ್ನು ಇನ್ನೂ ಸರಿಪಡಿಸಲು ಆಗಿಲ್ಲ. ಅದರಿಂದ ಸರ್ಕಾರದ ₹ 1 ಲಕ್ಷ ಪರಿಹಾರದಿಂದ ಹಲವು ಕುಟುಂಬಗಳು ವಂಚಿತವಾಗಿವೆ’ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

‘ಕೋವಿಡ್‌ನಿಂದ ಆಗಿರುವ ಯಾವುದೇ ಸಾವನ್ನೂ ಮುಚ್ಚಿಡಬಾರದು. ಎಲ್ಲ ಸಾವಿನ ಆಡಿಟ್‌ ಆಗಬೇಕು. ಸರ್ಕಾರ ನೀಡುವ ಪರಿಹಾರದಿಂದ ಯಾರೂ ವಂಚಿತರಾಗಬಾರದು’ ಎಂದು ಜಿಲ್ಲಾಧಿಕಾರಿ ಅವರು ಡಿಎಚ್‌ಒ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ ಸೂಚಿಸಿದರು.

‘60 ಸಾವಿರ ಡೋಸ್‌ ಲಸಿಕೆ ಲಭ್ಯ’: ‘ಎರಡು ದಿನದಿಂದ ಕೋವಿಡ್ ಲಸಿಕೆ ಪೂರೈಕೆಯ ಪ್ರಮಾಣ ಹೆಚ್ಚಿದ್ದು, ಈಗ 60 ಸಾವಿರ ಡೋಸ್‌ಗಳ ಸಂಗ್ರಹವಿದೆ. ಮೊದಲ ಡೋಸ್‌ ಪಡೆದು 84 ದಿನಗಳು ಕಳೆದವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು’ ಎಂದು ಡಿಎಚ್‌ಒ ಡಾ.ಕೆ.ಎಚ್‌.ಪ್ರಸಾದ್‌ ಹೇಳಿದರು.

‘ಎರಡನೇ ಡೋಸ್‌ ಪಡೆಯುವ ಅವಧಿ ಬಂದರೂ, ಲಸಿಕೆ ಅಲಭ್ಯತೆ ಕಾರಣ ಹಲವರು ಆತಂಕಕ್ಕೆ ಒಳಗಾಗಿದ್ದಾರೆ. ಅವರಿಗೆ ಮೊದಲು ಲಸಿಕೆ ನೀಡಲು ಕ್ರಮವಹಿಸಿ’ ಎಂದು ಶಾಸಕ ಸಾ.ರಾ.ಮಹೇಶ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.