ADVERTISEMENT

ರಾಜಕೀಯದಲ್ಲಿ ಯಶಸ್ಸು ಸಿಗಲು ಮಲ್ಲೇಶ್‌ ಕೂಡ ಕಾರಣ: ಸಿದ್ದರಾಮಯ್ಯ

ವಿಚಾರಸಂಕಿರಣದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 5:06 IST
Last Updated 30 ಮಾರ್ಚ್ 2023, 5:06 IST
ಮೈಸೂರಿನಲ್ಲಿ ಬುಧವಾರ ನಡೆದ ‘ಪ.ಮಲ್ಲೇಶ್ ಸ್ಮರಣಾರ್ಥ ವಿಚಾರ ಸಂಕಿರಣ’ದಲ್ಲಿ ಭಾವಚಿತ್ರಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಸಂಸ್ಥೆಯ ಉಪಾಧ್ಯಕ್ಷ ಸ.ರ.ಸುದರ್ಶನ, ಕಾರ್ಯದರ್ಶಿ ಸವಿತಾ ಪಿ.ಮಲ್ಲೇಶ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್, ಕೆ.ಎಸ್‌.ಶಿವರಾಮು ಇದ್ದಾರೆ
ಮೈಸೂರಿನಲ್ಲಿ ಬುಧವಾರ ನಡೆದ ‘ಪ.ಮಲ್ಲೇಶ್ ಸ್ಮರಣಾರ್ಥ ವಿಚಾರ ಸಂಕಿರಣ’ದಲ್ಲಿ ಭಾವಚಿತ್ರಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಸಂಸ್ಥೆಯ ಉಪಾಧ್ಯಕ್ಷ ಸ.ರ.ಸುದರ್ಶನ, ಕಾರ್ಯದರ್ಶಿ ಸವಿತಾ ಪಿ.ಮಲ್ಲೇಶ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್, ಕೆ.ಎಸ್‌.ಶಿವರಾಮು ಇದ್ದಾರೆ   

ಮೈಸೂರು: ‘ಪ.ಮಲ್ಲೇಶ್‌ ದೊಡ್ಡ ಮಾನವತಾವಾದಿ. ಸಮಾಜಮುಖಿಯಾಗಿ ಚಿಂತನೆ ಮಾಡುತ್ತಿದ್ದ ಅಪರೂಪದ ವ್ಯಕ್ತಿತ್ವ ಅವರದು. ನನಗೆ ರಾಜಕೀಯದಲ್ಲಿ ಯಶಸ್ಸು ಸಿಕ್ಕಿದ್ದರೆ ಅದಕ್ಕೆ ಮಲ್ಲೇಶ್‌ ಕೂಡ ಕಾರಣ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಬುಧವಾರ ‘ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ’ ಆಯೋಜಿಸಿದ್ದ ‘ಪ.ಮಲ್ಲೇಶ್ ಸ್ಮರಣಾರ್ಥ ವಿಚಾರ ಸಂಕಿರಣ’ ಉದ್ಘಾಟಿಸಿ ಅವರು, ‘ರಾಮದಾಸ್‌ ಹಾಗೂ ಮಲ್ಲೇಶ್‌ ಅವರಿಂದಾಗಿಯೇ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಬದ್ಧತೆ, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಲು ಸಾಧ್ಯವಾಗಿದೆ’ ಎಂದರು.

‘ಪ.ಮಲ್ಲೇಶ್‌ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅಪ್ಪಟ ಗಾಂಧಿವಾದಿಯಾಗಿದ್ದ ಅವರು, ನೇರ ನುಡಿ, ಪ್ರಾಮಾಣಿಕತೆ, ಬದ್ಧತೆ ಇರುವ, ಹೋರಾಟದಿಂದಲೇ ಬದಲಾವಣೆ ತರುವ ಗಟ್ಟಿತನ ಅವರಲ್ಲಿತ್ತು. ಮುಖ್ಯಮಂತ್ರಿ ಆಗಿದ್ದಾಗಲೂ ನೇರಾನೇರ ಮಾತನಾಡುತ್ತಿದ್ದರು. ಅಪ್ಪಟ ಹೋರಾಟಗಾರರಾಗಿದ್ದ ಅವರು ಜಾತಿ ತಾರತಮ್ಯ ಮಾಡಲಿಲ್ಲ’ ಎಂದು ಸ್ಮರಿಸಿದರು.

ADVERTISEMENT

‘1971ರಲ್ಲಿ ಕಾನೂನು ಕಾಲೇಜಿನಲ್ಲಿ ಓದುವಾಗ ಪರಿಚಯವಾಯಿತು. ಸಮಾಜವಾದಿ ಯುವಜನ ಸಭಾದಲ್ಲಿ ಮುಂಚೂಣಿ ನಾಯಕರಾಗಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕಾಲೇಜಿನಲ್ಲಿ ಗುರುಗಳಾಗಿದ್ದರು. ಕೋರ್ಟ್‌ ಬಳಿಯಿದ್ದ ಚಂದ್ರಕೆಫೆಯಲ್ಲಿ ಟೀ ಕುಡಿಯುತ್ತಿದ್ದೆವು’ ಎಂದು ನೆನೆದರು.

‘ಪ್ರತಿ ಸೋಮವಾರ ಸಂಜೆ ಮಹಾರಾಜ ಕಾಲೇಜಿನ ಕ್ಯಾಂಟೀನ್‌ನಲ್ಲಿ ನಂಜುಂಡಸ್ವಾಮಿ, ಶ್ರೀರಾಮ್‌, ‍ಪ್ರೊ.ಕೆ.ರಾಮದಾಸ್‌, ಪೂರ್ಣಚಂದ್ರತೇಜಸ್ವಿ ಸೇರುತ್ತಿದ್ದೆವು. ಅಂಬೇಡ್ಕರ್‌, ಗಾಂಧಿ, ಲೋಹಿಯಾ ಚಿಂತನೆಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ, ರೈತ, ಭಾಷಾ ಚಳವಳಿ ಆರಂಭವಾಗಿರಲಿಲ್ಲ. ಸಮಾಜವಾದಿ ಚಳವಳಿಗಳಿಂದ ಹೊಸ ವ್ಯವಸ್ಥೆ ಬರಬೇಕು ಎಂಬುದೇ ಉದ್ದೇಶವಾಗಿತ್ತು’ ಎಂದರು.

‘ತುರ್ತುಪರಿಸ್ಥಿತಿಯಲ್ಲಿ ಜೊತೆಯಲ್ಲಿಯೇ ಹೋರಾಟ ಮಾಡಿದ್ದೆವು. ಪೊಲೀಸರು ವಶಕ್ಕೆ ಪಡೆದು ಒಂದು ರಾತ್ರಿ ಠಾಣೆಯಲ್ಲಿರಿಸಿದ್ದರು. ಗೋಕಾಕ ಚಳವಳಿಯಲ್ಲೂ ಮಲ್ಲೇಶ್‌ ಸಕ್ರಿಯವಾಗಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿ ನಡೆಯಬೇಕು ಎಂದು ತೀರ್ಮಾನ ತೆಗೆದುಕೊಳ್ಳುವ ಹಿಂದೆ ಮಲ್ಲೇಶ್‌ ಇದ್ದರು. ಆದರೆ, ಸುಪ್ರೀಂ ಕೋರ್ಟ್‌ ಪುರಸ್ಕರಿಸಲಿಲ್ಲ’ ಎಂದರು.

‘ಪ್ರಸ್ತುತ ರಾಜಕಾರಣದಲ್ಲಿ ಪ್ರಾಮಾಣಿಕರಾಗುವುದು ಕಷ್ಟದ ಕೆಲಸ. ಚುನಾವಣಾ ವ್ಯವಸ್ಥೆಯು ಅಕ್ರಮಗಳಿಂದ ಕೂಡಿದೆ. ಮೊದಲ ಚುನಾವಣೆಗೆ ನಿಂತಾಗ ₹ 63 ಸಾವಿರ ಖರ್ಚಾಗಿತ್ತು. ಈಗ ದುಡ್ಡಿಲ್ಲದೇ ಮತದಾನವಾಗದು. ಚುನಾವಣೆ ಭ್ರಷ್ಟಗೊಂಡಿದ್ದರೆ ರಾಜಕಾರಣಿಗಳೂ ಕಾರಣ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್‌ ಮುಖಂಡರಾದ ಡಾ.ಎಚ್‌.ಡಿ.ಮಹದೇವಪ್ಪ, ಎಂ.ಕೆ.ಸೋಮಶೇಖರ್, ಪ್ರೊ.ಮುಜಾಫರ್ ಅಸ್ಸಾದಿ, ಲೇಖಕ ನಾ.ದಿವಾಕರ, ಪದ್ಮಾ ಶ್ರೀರಾಮ್, ಸಂಸ್ಥೆಯ ಉಪಾಧ್ಯಕ್ಷ ಸ.ರ.ಸುದರ್ಶನ, ಕಾರ್ಯದರ್ಶಿ ಸವಿತಾ ಪಿ.ಮಲ್ಲೇಶ್, ಪ್ರೊ.ಎಚ್.ಜಿ.ಕೃಷ್ಣಪ್ಪ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.