ADVERTISEMENT

ಮೈಸೂರು: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 16:08 IST
Last Updated 19 ಜೂನ್ 2025, 16:08 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಮೈಸೂರು: ವ್ಯಕ್ತಿಯೊಬ್ಬರು ನಾಗನಹಳ್ಳಿ ಬಳಿ ಚಲಿಸುತ್ತಿದ್ದ ರೈಲಿನಿಂದನಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.

ADVERTISEMENT

ಬೆಂಗಳೂರು ನಿವಾಸಿ ಪ್ರಸನ್ನ (64) ಮೃತಪಟ್ಟವರು.

‘ಪ್ರಸನ್ನ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಮಠಕ್ಕೆ ತೆರಳಿದ್ದರು. ಬುಧವಾರ ರಾತ್ರಿ ಮುರುಡೇಶ್ವರ– ಬೆಂಗಳೂರು ಎಕ್ಸ್‌ಪ್ರೆಸ್‌ ಮೂಲಕ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದು, ಗುರುವಾರ ಮುಂಜಾನೆ ನಾಗನಹಳ್ಳಿಯ ಬಳಿಯ ತಿರುವೊಂದರಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ’ ಎಂದು ರೈಲ್ವೆ ಪೊಲೀಸರು ತಿಳಿಸಿದರು. ಕೆ.ಆರ್‌. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಯಿತು. ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಯುಡಿಆರ್‌ ಪ್ರಕರಣ ದಾಖಲಾಗಿದೆ.

ಕೆಎಸ್‌ಐಸಿಗೆ ವಂಚನೆ: ಪ್ರಕರಣ ದಾಖಲು

ಮೈಸೂರು: ನಕಲಿ ರಶೀದಿ ಸೃಷ್ಟಿಸಿ ಕೆಎಸ್‌ಐಸಿ ರೇಷ್ಮೆ ನೇಯ್ಗೆ ಕಾರ್ಖಾನೆಗೆ ₹18.75 ಲಕ್ಷ ವಂಚನೆ ಮಾಡಿದ ಆರೋಪದಲ್ಲಿ ಏಳು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಜಯಲಕ್ಷ್ಮೀಪುರಂ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಕಾಳಿದಾಸ ರಸ್ತೆಯಲ್ಲಿನ ಕೆಎಸ್‌ಐಸಿ ಮಾರಾಟ ಮಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಳಿಗೆಯ ಮಾಜಿ ಉಸ್ತುವಾರಿ ಯಶವಂತ್ ಕುಮಾರ್, ಸೇಲ್ಸ್ ಸಹಾಯಕರಾದ ರೇವಂತ್ ಕುಮಾರ್, ಫಾತಿಮಾ, ಎಂ.ವಿ.ಶೋಭಾ, ಅಮ್ಜದ್ ಅಹಮ್ಮದ್, ಮಹಮ್ಮದ್ ಅಮೀರ್, ಅನು ವಿರುದ್ಧ ಕೆಎಸ್‌ಐಸಿ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಎಸ್.ಜಿ.ಸಿದ್ದಲಿಂಗ ಪ್ರಸಾದ್ ದೂರು ನೀಡಿದ್ದಾರೆ.

‘2024 ಸೆ.2ರಿಂದ 2025 ಮೇ 31ರವರೆಗೆ ಮಾರಾಟ ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯಶವಂತ್ ಕುಮಾರ್ ಮತ್ತು ಇತರ ಸಿಬ್ಬಂದಿ, ನಕಲಿ ರಶೀದಿಗಳನ್ನು ಸೃಷ್ಟಿಸಿ, ಕಂತುಗಳಲ್ಲಿ ಹಣ ಕಟ್ಟಿಸಿಕೊಳ್ಳುವ ಯೋಜನೆಯಲ್ಲಿ ಸರ್ಕಾರಿ ನೌಕರರಿಗೆ ಸೀರೆಗಳನ್ನು ಮಾರಿದ್ದರು. ಹಣವನ್ನು ಸಂಸ್ಥೆಯ ಖಾತೆಗೆ ಜಮೆ ಮಾಡದೇ ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯುವ ಉದ್ಯಮಿ ಆತ್ಮಹತ್ಯೆ

ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ ಎಸ್.ಎಸ್. ಇಂಡಸ್ಟ್ರೀಸ್ ಕಾರ್ಖಾನೆ ಆವರಣದಲ್ಲಿ ವಿವಿ ಮೊಹಲ್ಲಾದ ನಿವಾಸಿ, ಉದ್ಯಮಿ ಅರ್ಜುನ್ (40) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಾಜನ ವಿದ್ಯಾಸಂಸ್ಥೆಯ ಸಂಸ್ಥಾಪಕ ವಾಸುದೇವ ಮೂರ್ತಿ ಅವರ ಮೊಮ್ಮಗ ಅರ್ಜುನ್‌ ಕೈಗಾರಿಕೆ ನಡೆಸುತ್ತಿದ್ದರು. ‘ಮಂಗಳವಾರ ಬೆಳಿಗ್ಗೆ ಮನೆಯಲ್ಲಿ ಅರ್ಜುನ್ ಕಾಣದೇ ಇದ್ದಾಗ ಕುಟುಂಬದವರು ಮೊಬೈಲ್ ಪೋನ್‌ಗೆ ಸಂಪರ್ಕಿಸಿದ್ದು, ಸಂಪರ್ಕಕ್ಕೆ ಸಿಗದಿದ್ದಾಗ ಎಲ್ಲೆಡೆ ಹುಡುಕಾಡಿದ್ದಾರೆ. ಬಳಿಕ ಮನೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮುಂಜಾನೆಯೇ ಮನೆಯಿಂದ ಹೊರ ಹೋಗಿರುವುದು ಗೊತ್ತಾಗಿದೆ. ಕಾರ್ಖಾನೆ ಬಳಿ ತೆರಳಿರುವ ಬಗ್ಗೆ ಅನುಮಾನದಿಂದ ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಕಾರ್ಖಾನೆಯ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ‘ಅಸಹಜ ಸಾವು ಪ್ರಕರಣ’ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.