ADVERTISEMENT

ನರ ಭಕ್ಷಕ ಹುಲಿ ಸುಳಿದಾಟದ ಶಂಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 15:37 IST
Last Updated 24 ಡಿಸೆಂಬರ್ 2018, 15:37 IST
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ   

ಎಚ್.ಡಿ.ಕೋಟೆ: ತಾಲ್ಲೂಕಿನ ಡಿ.ಬಿ.ಕುಪ್ಪೆ ವ್ಯಾಪ್ತಿಯ ನಾಗರಹೊಳೆ ಅರಣ್ಯದಲ್ಲಿ ಸೋಮವಾರ ಮಾನಿಮೂಲೆ ಹಾಡಿಯ ಯುವಕ ಮಧು (28) ರುಂಡ, ದೇಹದ ಕೆಲ ಭಾಗಗಳು ಪತ್ತೆಯಾಗಿವೆ. ಹುಲಿ ತಿಂದು ಹಾಕಿರುವ ಶಂಕೆ ವ್ಯಕ್ತವಾಗಿದೆ.

ಸೌದೆ ತರಲು ಭಾನುವಾರ ಕಾಡಿಗೆ ಹೋಗಿದ್ದು, ರಾತ್ರಿಯಾದರೂ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಹಾಡಿಯ ಜನರು ಸೋಮವಾರ ಹುಡುಕಾಟ ನಡೆಸಿದಾಗ ರುಂಡದ ಭಾಗ ಕಾಡಿನಲ್ಲಿ ಪತ್ತೆಯಾಗಿದೆ.

ಮುಖದ ಮೇಲಿನ ಚರ್ಮ ಸಂಪೂರ್ಣ ಕಿತ್ತುಹೋಗಿದೆ. ಸ್ಥಳದಲ್ಲಿ ದೊರೆತ ಬಟ್ಟೆ, ಕತ್ತಿಯ ಆಧಾರದ ಮೇಲೆ ಗುರುತಿಸಲಾಗಿದೆ. ಮಧು ತಂದೆ ದಾಸ ಸಹ ಕೆಲವು ವರ್ಷಗಳ ಹಿಂದೆ ಆನೆ ದಾಳಿಯಿಂದ ಮೃತಪಟ್ಟಿದ್ದರು.

ADVERTISEMENT

‘ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿಯಲಿದೆ. ಹುಲಿ, ಚಿರತೆ ಅಥವಾ ಕರಡಿ ದಾಳಿಗೆ ಬಲಿಯಾಗಿರಬಹುದು. ಅಥವಾ ಆನೆ ದಾಳಿಗೆ ಸಿಲುಕಿ ಮೃತಪಟ್ಟ ಬಳಿಕ ಇಲ್ಲವೇ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮೃತದೇಹವನ್ನು ಪ್ರಾಣಿಗಳು ತಿಂದಿರಬಹುದು’ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ನಾರಾಯಣಸ್ವಾಮಿ ತಿಳಿಸಿದ್ದಾರೆ.

ಡಿ.ಬಿ.ಕುಪ್ಪೆ ಭಾಗದಲ್ಲಿ ಹುಲಿಗಳ ಸಂಖ್ಯೆ ಹೇರಳವಾಗಿದೆ. ಜನವರಿಯಲ್ಲಿ ನಡೆದ ಹುಲಿಗಣತಿ ಸಮಯದಲ್ಲಿ ಈ ಭಾಗದ ಕಾಡಿನಲ್ಲಿ ಹೆಚ್ಚು ಹುಲಿಗಳು ಪತ್ತೆಯಾಗಿದ್ದವು. ಇಲ್ಲಿಂದ ಸ್ವಲ್ಪ ದೂರದಲ್ಲಿ ಕೈಮರ ಕಳ್ಳಬೇಟೆ ತಡೆ ಶಿಬಿರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರನ್ನು ಕಳೆದ ಮೂರು ವರ್ಷಗಳ ಹಿಂದೆ ಹುಲಿ ತಿಂದು ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.