ಮೈಸೂರು: ಜಿಲ್ಲೆಯ ಹಣ್ಣುಪ್ರಿಯರಿಗೆ ಈ ವಾರಾಂತ್ಯದಲ್ಲಿ ಬಗೆಬಗೆಯ ಮಾವು ಸವಿಯುವ ಅವಕಾಶ ಒದಗಲಿದೆ. ನಗರದ ಕುಪ್ಪಣ್ಣ ಉದ್ಯಾನದಲ್ಲಿ ಮೇ 23ರಿಂದ 25ರವರೆಗೆ ಮಾವು ಮತ್ತು ಹಲಸು ಮೇಳ ನಡೆಯಲಿದೆ.
ತೋಟಗಾರಿಕೆ ಇಲಾಖೆಯು ಪ್ರತಿ ವರ್ಷ ಮೇನಲ್ಲಿ ಮಾವು ಮೇಳ ಆಯೋಜಿಸುತ್ತಿದ್ದು, ಮಾವು ಬೆಳೆಗಾರರಿಂದ ಗ್ರಾಹಕರಿಗೆ ನೇರವಾಗಿ ಕಾರ್ಬೈಡ್ ಮುಕ್ತ ಮಾವು ಮಾರಾಟಕ್ಕೆ ವೇದಿಕೆ ಒದಗಿಸುತ್ತಿದೆ. ಮೂರು ದಿನಗಳ ಮೇಳದಲ್ಲಿ ರಾಮನಗರ, ಮೈಸೂರು, ಮಂಡ್ಯ, ಕೋಲಾರ ಮೊದಲಾದ ಜಿಲ್ಲೆಗಳಿಂದ ಮಾವು ಮಾರಾಟಕ್ಕೆ ಬರಲಿದೆ.
ಕಳೆದ ಕೆಲವು ವರ್ಷಗಳಿಂದ ಮಾವಿನ ಜೊತೆಗೆ ಹಲಸು ಮಾರಾಟಕ್ಕೂ ಅವಕಾಶ ನೀಡುತ್ತಿದ್ದು, ಈ ಬಾರಿಯ ಮೇಳದಲ್ಲೂ ಹಲಸಿನ ಹಣ್ಣು ಗ್ರಾಹಕರಿಗೆ ಸಿಗಲಿದೆ.
ಉತ್ತಮ ವಹಿವಾಟಿನ ನಿರೀಕ್ಷೆ: ವರ್ಷದಿಂದ ವರ್ಷಕ್ಕೆ ಸಾರ್ವಜನಿಕರಿಂದ ಮಾವು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಈ ಬಾರಿಯ ಮೇಳದಲ್ಲಿ ಇನ್ನಷ್ಟು ಉತ್ತಮ ವಹಿವಾಟು ನಡೆಯುವ ನಿರೀಕ್ಷೆ ಇದೆ. ಬದಾಮಿ, ರಸಪುರಿ, ಸೇಂದೂರ, ಮಲಗೋವಾ, ಮಲ್ಲಿಕಾ, ರಸಪುರಿ, ಸಕ್ಕರೆಗುತ್ತಿ, ತೋತಾಪುರಿ ಹಣ್ಣುಗಳೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ಸಿಗಲಿವೆ.
ಕಳೆದ ವರ್ಷ ಮೇ 24ರಿಂದ 26ರವರೆಗೆ ನಡೆದ ಮೇಳದಲ್ಲಿ ಬರೋಬ್ಬರಿ 130 ಟನ್‌ಗೂ ಅಧಿಕ ಮಾವು ಮಾರಾಟವಾಗಿತ್ತು. 35ಕ್ಕೂ ಅಧಿಕ ರೈತರು ಮಳಿಗೆಗಳ ಮೂಲಕ ಗ್ರಾಹಕರಿಗೆ ನೇರವಾಗಿ ಮಾವು ಮಾರಾಟ ಮಾಡಿದ್ದರು.
ಮೇ 23ರಿಂದ 25ರವರೆಗೆ ಕುಪ್ಪಣ್ಣ ಉದ್ಯಾನದಲ್ಲಿ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗುತ್ತಿದ್ದು ರೈತರಿಂದ ಗ್ರಾಹಕರಿಗೆ ನೇರವಾಗಿ ಹಣ್ಣುಗಳ ಮಾರಾಟ ಇರಲಿದೆ.ಮಂಜುನಾಥ ಅಂಗಡಿ, ತೋಟಗಾರಿಕೆ ಉಪನಿರ್ದೇಶಕ
2023ರ ಮೇ ಅಂತ್ಯದಲ್ಲಿ ನಡೆದಿದ್ದ ಮಾವು ಮೇಳದಲ್ಲಿ ಒಟ್ಟು 28 ರೈತರು ಪಾಲ್ಗೊಂಡಿದ್ದರು. 88 ಟನ್‌ನಷ್ಟು ಮಾವು ಮಾರಾಟ ನಡೆದಿತ್ತು. ಸುಮಾರು 30 ಸಾವಿರದಷ್ಟು ಗ್ರಾಹಕರು ಮಾವು ಖರೀದಿಸಿದ್ದರು.
ಹಣ್ಣಿನ ಬೆಲೆ ಇಳಿಕೆ:
ಮಾರುಕಟ್ಟೆಗೆ ಮಾವಿನ ಆವಕ ಹೆಚ್ಚಿರುವ ಹಿನ್ನೆಲೆಯಲ್ಲಿ ಹಣ್ಣುಗಳ ಬೆಲೆಯೂ ಇಳಿಕೆ ಕಾಣುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ರಸಪುರಿ ಹಾಗೂ ಬದಾಮಿ ತಳಿಯ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ರಸಪುರಿ ಪ್ರತಿ ಕೆ.ಜಿ.ಗೆ ಸರಾಸರಿ ₹120ರ ದರವಿದ್ದರೆ ಬದಾಮಿ ₹100ರ ಸರಾಸರಿಯಲ್ಲಿ ವ್ಯಾಪಾರ ನಡೆದಿದೆ. ಸೇಂದೂರ ₹60 ತೋತಾಪುರಿ ₹40ರ ದರ ಹೊಂದಿದೆ. ಮಲಗೋವಾ ಮಲ್ಲಿಕಾ ಮೊದಲಾದ ತಳಿಗಳ ಮಾವು ಹೆಚ್ಚು ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.