ADVERTISEMENT

ಮಾವಿನ ದರ ಕುಸಿತ; ಬೆಳೆಗಾರರ ಪರದಾಟ

ಮುಂಗಾರಿನಲ್ಲಿ ತರಕಾರಿಗಳ ಬೆಲೆ ಇಳಿಯುವ ತವಕ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 16:39 IST
Last Updated 10 ಜೂನ್ 2019, 16:39 IST
ಮಾವಿನಹಣ್ಣುಗಳು
ಮಾವಿನಹಣ್ಣುಗಳು   

ಮೈಸೂರು: ಮಾವಿನಹಣ್ಣುಗಳ ಬೆಲೆ ಕುಸಿಯಲಾರಂಭಿಸಿದೆ. ಗ್ರಾಮಾಂತರ ಭಾಗಗಳಲ್ಲಿ ಹಣ್ಣುಗಳ ಖರೀದಿಗೆ ವ್ಯಾಪಾರಸ್ಥರು ಹೋಗುತ್ತಿಲ್ಲ. ಮರವನ್ನೇ ಗುತ್ತಿಗೆಗೆ ಪಡೆಯುವವರು ತೀರಾ ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಇದು ಬೆಳೆಗಾರರಲ್ಲಿ ನಷ್ಟ ಉಂಟು ಮಾಡುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಯರಹುಂಡಿ ಗ್ರಾಮದ ರೈತ ಮಹಿಳೆ ಅನುರಾಧಾ, ‘ರೈತರಿಗೆ ತೀರಾ ಕನಿಷ್ಠ ದರ ಸಿಗುತ್ತಿದೆ. ಇದು ಬೆಳೆಗಾರರಿಗೆ ನಷ್ಟ ಉಂಟು ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ಮಾವು ಕೋಯ್ಲಿಗೆ ಬರುವ ಹೊತ್ತಿಗೆ ಬೇರೆ ಕಡೆಯಿಂದ ಮಾವು ಬಂದಿರುತ್ತದೆ. ಮಾವನ್ನು ಸಂಸ್ಕರಿಸುವ ವಿಧಾನ ರೈತರಿಗೆ ತಿಳಿದಿಲ್ಲ. ಇದು ಬೆಲೆ ಇಳಿಕೆಗೆ ಕಾರಣವಾಗಿದೆ. ತೋಟಗಾರಿಕೆ ಇಲಾಖೆಯವರು ಮಾವನ್ನು ಸಂಸ್ಕರಿಸುವ ಕುರಿತು ರೈತರಿಗೆ ಹೆಚ್ಚು ಹೆಚ್ಚು ತರಬೇತಿಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸುತ್ತಾರೆ.

ADVERTISEMENT

ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ತೀರಾ ಇಳಿದಿಲ್ಲ. ಆದರೆ, ರಸ್ತೆಬದಿ ವ್ಯಾಪಾರ, ಸೈಕಲ್‌ನಲ್ಲಿ ವ್ಯಾಪಾರ ಮಾಡುವವರ ಬಳಿ ಬೆಲೆ ಕಡಿಮೆ ಇದೆ. ಹಾಪ್‌ಕಾಮ್ಸ್‌ನಲ್ಲಿ ಸೆಂದೂರಾ ಕೆ.ಜಿ ₹ 30ಕ್ಕೆ ಹಾಗೂ ತೋತಾಪುರಿ ₹ 20ಕ್ಕೆ ಸಿಗುತ್ತಿದೆ. ಮೊದಲಿನಷ್ಟು ಬೆಲೆ ಮಾವಿಗೆ ಇಲ್ಲವಾಗಿದೆ.

ಧಾನ್ಯಗಳು ಸ್ಥಿರ:

ಹೆಸರುಬೇಳೆ ₹ 86ರಿಂದ 85ಕ್ಕೆ ಕೊಂಚ ಕಡಿಮೆಯಾಗಿರುವುದನ್ನು ಬಿಟ್ಟರೆ ಉಳಿದೆಲ್ಲ ಧಾನ್ಯಗಳ ದರಗಳು ಸ್ಥಿರವಾಗಿವೆ. ಉದ್ದಿನಬೇಳೆ ₹ 86, ಹೆಸರುಕಾಳು ₹ 84, ತೊಗರಿಬೇಳೆ ₹ 94ರಲ್ಲೇ ಇದೆ.

ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಕಳೆದ ವಾರ ₹ 3.65 ಇದ್ದದ್ದು, ಈಗ ₹ 3.80ಕ್ಕೆ ಏರಿಕೆ ಕಂಡಿದೆ. ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್‌ನ ಬ್ರಾಯ್ಲರ್ ಕೋಳಿ ಮಾಂಸದ ದರ ಕೆ.ಜಿಗೆ ₹ 104 ಇದ್ದದ್ದು ₹ 109ಕ್ಕೆ ಹೆಚ್ಚಿದೆ. ಪೇರೆಂಟ್‌ ಕೋಳಿ ಮಾಂಸದ ದರವು ಕೆ.ಜಿಗೆ ₹ 60ರಲ್ಲೇ ಮುಂದುವರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.