ADVERTISEMENT

ಮನು ಸಂಸ್ಕೃತಿಯಿಂದ ಮೌಢ್ಯದ ವಿಜೃಂಭಣೆ– ಎಂ.ಕೆ.ಸೋಮಶೇಖರ್ ಬೇಸರ

ಕನಕದಾಸ ಅವರ ಜಯಂತಿ ಮಹೋತ್ಸವದಲ್ಲಿ ಭಾಗಿ, ವೈಚಾರಿಕತೆ ಬೆಳೆಸಿಕೊಳ್ಳಲು ಕರೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 15:12 IST
Last Updated 3 ಡಿಸೆಂಬರ್ 2020, 15:12 IST
ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ ವತಿಯಿಂದ ಮೈಸೂರಿನ ಕಾಗಿನೆಲೆ ಶಾಖಾಮಠದ ಕನಕ ಗುರುಪೀಠದಲ್ಲಿ ಗುರುವಾರ ನಡೆದ ಕನಕದಾಸ ಅವರ ಜಯಂತಿ ಮಹೋತ್ಸವದಲ್ಲಿ ಸಮಿತಿಯ ಅಧ್ಯಕ್ಷ ಎಂ.ಕೆ.ಸೋಮಶೇಖರ್ ಕನಕದಾಸ ಅವರ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು
ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ ವತಿಯಿಂದ ಮೈಸೂರಿನ ಕಾಗಿನೆಲೆ ಶಾಖಾಮಠದ ಕನಕ ಗುರುಪೀಠದಲ್ಲಿ ಗುರುವಾರ ನಡೆದ ಕನಕದಾಸ ಅವರ ಜಯಂತಿ ಮಹೋತ್ಸವದಲ್ಲಿ ಸಮಿತಿಯ ಅಧ್ಯಕ್ಷ ಎಂ.ಕೆ.ಸೋಮಶೇಖರ್ ಕನಕದಾಸ ಅವರ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು   

ಮೈಸೂರು: ಮನು ಸಂಸ್ಕೃತಿಯಿಂದಾಗಿ ಇಂದಿಗೂ ಜಾತಿ ವ್ಯವಸ್ಥೆ ಬಲಗೊಳ್ಳುತ್ತಿದೆ. ಮೌಢ್ಯವು ವಿಜೃಂಭಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.

ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ ವತಿಯಿಂದ ಇಲ್ಲಿನ ಕಾಗಿನೆಲೆ ಶಾಖಾಮಠದ ಕನಕ ಗುರುಪೀಠದಲ್ಲಿ ಗುರುವಾರ ನಡೆದ ಕನಕದಾಸ ಅವರ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಬುದ್ಧ ನೀಡಿದ ಬೆಳಕನ್ನು ಮನುಸಂಸ್ಕೃತಿ ತಡೆಯಿತು. ನಂತರ, ಕನಕದಾಸರು ಪ್ರಖರವಾದ ವೈಚಾರಿಕ ವಿಷಯಗಳನ್ನು ಮಂಡಿಸಿದರು. ಕುಲಕುಲಕುಲವೆಂದು ಹೊಡೆದಾಡದಿರಿ ಎಂದು ಬುದ್ದಿ ಮಾತು ಹೇಳಿದರು. ಆದರೂ, ಇಂದಿಗೂ ಜಾತಿ ವ್ಯವಸ್ಥೆ ಮುಂದುವರಿಯುತ್ತಿರುವುದಕ್ಕೆ ಮನುಸಂಸ್ಕೃತಿಯೇ ಕಾರಣ ಎಂದು ಅವರು ವಿಶ್ಲೇಷಿಸಿದರು.

ADVERTISEMENT

ವೈಚಾರಿಕ ನೆಲೆಗಟ್ಟನ್ನು ಎತ್ತಿ ಹಿಡಿದ ಸಂತಶ್ರೇಷ್ಠರು ಕನಕದಾಸರು. ಇವರ ತತ್ವ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು.

ಡೊಂಕು ಬಾಲದ ನಾಯಕರೇ ಎಂದು ಹೇಳುವ ಮೂಲಕ ಅಂದಿನ ರಾಜ, ಮಹಾರಾಜರನ್ನೂ ಅವರು ಟೀಕಿಸದೇ ಬಿಟ್ಟಿಲ್ಲ. ಮಡಿ, ಮಡಿ ಎನ್ನುವ ಜನಾಂಗವನ್ನು ಅವರು ನೆಲಕ್ಕೆ ಯಾವ ಕುಲ, ಜಲಕ್ಕೆ ಯಾವ ಕುಲ ಎಂದು ಪ್ರಶ್ನಿಸಿದರು. ಅವರ ವೈಚಾರಿಕತೆ ನಿಜಕ್ಕೂ ದೊಡ್ಡದು ಎಂದು ಹೇಳಿದರು.

ಇದಕ್ಕೂ ಮುನ್ನ ಗುರುಪೀಠದಲ್ಲಿದ್ದ ಕನಕದಾಸರ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು.

ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಬ್ಯಾಂಕ್ ಎಂ.ಪುಟ್ಟಸ್ವಾಮಿ, ಮುಖಂಡರಾದ ಶಿವಣ್ಣ, ಡಾ.ಪುಟ್ಟಸಿದ್ಧಯ್ಯ, ಗೋಪಿ, ರವಿ, ರವಿಕುಮಾರ್, ಶಂಕರ್, ಚಿಕ್ಕಣ್ಣ, ಸೋಮು, ಧರ್ಮೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.