ಕೆ.ಆರ್.ನಗರ: ಸುಖಕರ ಪ್ರಯಾಣಕ್ಕಾಗಿ ರೈಲನ್ನು ಆಯ್ಕೆ ಮಾಡಿಕೊಳ್ಳುವ ಬಹುತೇಕ ಪ್ರಯಾಣಿಕರು ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಜನರ ಅನುಕೂಲಕ್ಕಾಗಿ 30 ವರ್ಷಗಳ ಹಿಂದೆ ಪಟ್ಟಣದಿಂದ 3 ಕಿ.ಮೀ. ದೂರದ ಹಳೇ ಯಡತೊರೆಯಲ್ಲಿದ್ದ ರೈಲು ನಿಲ್ದಾಣವನ್ನು 1 ಕಿ.ಮೀ ದೂರದ ಕಂಠೇನಹಳ್ಳಿಗೆ ಸ್ಥಳಾಂತರಿಸಲಾಯಿತು. ಹಂತ ಹಂತವಾಗಿ ಅಭಿವೃದ್ಧಿ ಕಂಡ ರೈಲು ನಿಲ್ದಾಣದಲ್ಲಿ ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ವಿವಿಧ ಭಾಗಗಳ ನೂರಾರು ಪ್ರಯಾಣಿಕರು ಮೈಸೂರು, ಅರಸೀಕೆರೆ, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ದೂರದ ಊರುಗಳಿಗೆ ನಿತ್ಯ ಪ್ರಯಾಣ ಮಾಡುತ್ತಿದ್ದಾರೆ.
ನಿಲ್ದಾಣದಲ್ಲಿ ಎರಡು ಪ್ಲಾಟ್ ಫಾರ್ಮ್‌ಗಳಿದ್ದು, 1ನೇ ಪ್ಲಾಟ್ ಫಾರ್ಮ್‌ನಲ್ಲಿ ಲಿಫ್ಟ್ ಇದ್ದರೆ, 2ರಲ್ಲಿ ಇಲ್ಲ. ಕೆ.ಆರ್.ನಗರಕ್ಕೆ ಬರುವ ಬಹುತೇಕ ರೈಲುಗಳು 2ನೇ ಪ್ಲಾಟ್ ಫಾರ್ಮ್‌ನಲ್ಲಿಯೇ ನಿಲ್ಲಿಸುತ್ತಿದ್ದು, ಪ್ರಯಾಣಿಕರು ಪಾದಚಾರಿ ಮೇಲ್ಸೇತುವೆ ಹತ್ತಿ ನಿರ್ಗಮಿಸಬೇಕು. ಅಶಕ್ತರು, ಹೆಚ್ಚು ತೂಕದ ಲಗೇಜ್ ತರುವ ಪ್ರಯಾಣಿಕರ ಕಷ್ಟ ಹೇಳತೀರದಾಗಿದೆ.
ವಯೋ ವೃದ್ಧರು, ಇಲ್ಲಿನ ಮೂಳೆ ತಜ್ಞರ ಭೇಟಿಗಾಗಿ ಬರುವ ಬಹುತೇಕ ರೋಗಿಗಳನ್ನು ಸಂಬಂಧಿಕರು ಹೊತ್ತುಕೊಂಡೇ ಹೋಗಬೇಕಿದೆ. ರೈಲು ನಿಲ್ದಾಣದ ಬಳಿ ಆಟೊಗಳು ನಿಲ್ಲಲು ಅವಕಾಶ ಇಲ್ಲದೇ ಇರುವುದರಿಂದ ಮತ್ತೊಂದಿಷ್ಟು ದೂರ ಲಗೇಜ್ ಹೊತ್ತುಕೊಂಡು ಹೊಗಬೇಕಾಗುತ್ತದೆ.
ವಿವಿಧ ಸ್ಥಳಗಳಿಗೆ ಬಹುತೇಕ ನೌಕರರು ರೈಲು ನಿಲ್ದಾಣಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಾರೆ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇರುವುದರಿಂದ ವಾಹನಗಳನ್ನು ವಿಧಿ ಇಲ್ಲದೆ ನಿಲ್ದಾಣ ಆವರಣದಲ್ಲಿ ನಿಲ್ಲಿಸಲಾಗುತ್ತಿದ್ದು, ₹200ರಿಂದ ₹500ರವರೆಗೆ ದಂಡ ಕಟ್ಟಿಟ್ಟ ಬುತ್ತಿ, ದಂಡ ಕಟ್ಟಲು ಮೈಸೂರು ರೈಲು ನಿಲ್ದಾಣದಲ್ಲಿರುವ ನ್ಯಾಯಾಲಯಕ್ಕೆ ಹೋಗಬೇಕಿರುವುದು ಮತ್ತೊಂದು ಸಂಕಷ್ಟ.
‘ಇಲ್ಲಿನ ರೈಲು ನಿಲ್ದಾಣವನ್ನು ಗುಡ್ಡ ಕೊರೆದು ತಗ್ಗು ಪ್ರದೇಶದಲ್ಲಿ ನಿರ್ಮಿಸಿದ್ದರಿಂದ ಲಾರಿಗಳು ಕೂಡ ಗೂಡ್ಸ್ ರೈಲಿನ ಪಕ್ಕ ನಿಂತುಕೊಂಡು ಸರಕು ಹಾಕಿಕೊಳ್ಳಲು ಆಗುವುದಿಲ್ಲ. ಇಳಿಸಿಕೊಳ್ಳಲು ಆಗುವುದಿಲ್ಲ. ಕೆ.ಆರ್.ನಗರದ ಸರಕುಗಳಿದ್ದರೆ ಮೈಸೂರಿಗೆ ಹೋಗಿ ಕೊಡಬೇಕು, ತರಬೇಕು. ಸಮತಟ್ಟಾದ ಜಾಗದಲ್ಲಿ ರೈಲು ನಿಲ್ದಾಣ ನಿರ್ಮಾಣವಾಗಿದ್ದರೆ ಬಹುತೇಕ ಸಮಸ್ಯೆಗಳು ಇಲ್ಲಿ ಉದ್ಭವಿಸುತ್ತಿರಲಿಲ್ಲ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಗಳನ್ನು ಬಗೆ ಹರಿಸಬೇಕು’ ಎನ್ನುವುದು ಪ್ರಯಾಣಿಕರ, ಉದ್ಯಮಿಗಳ ಒತ್ತಾಯವಾಗಿದೆ.
ವಯೋವೃದ್ಧರು ಇಲ್ಲಿನ ಪಾದಚಾರಿ ಮೇಲ್ಸೇತುವೆ ಹತ್ತಿ ನಿಲ್ದಾಣದ ಹೊರಗೆ ಹೋಗುವುದು ಕಷ್ಟವಾಗುತ್ತದೆ. ಲಿಫ್ಟ್ ಇದ್ದರೆ ಅನುಕೂಲವಾಗುತ್ತದೆಸಿದ್ದರಾಮೇಗೌಡ ಆದಿಶಕ್ತಿ ಬಡಾವಣೆ ನಿವಾಸಿ ಕೆ.ಆರ್.ನಗರ
ವೃದ್ಧರು ಅಂಗವಿಕಲರಿಗಾಗಿ ರೈಲು ನಿಲ್ದಾಣದಲ್ಲಿ ವೀಲ್ ಚೇರ್ ಕಾದಿರಿಸಿರುತ್ತೇವೆ ಕೇಳಿದರೆ ಒದಗಿಸಲಾಗುತ್ತದೆ.ಯೋಗೇಂದ್ರ ಕುಮಾರ್ ಸಿಂಗ್ ಸ್ಟೇಷನ್ ಮಾಷ್ಟರ್ ಕೆ.ಆರ್.ನಗರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.