ADVERTISEMENT

ಮೇಯರ್‌ ಚುನಾವಣೆ: ಬಿರುಸಿನ ಚಟುವಟಿಕೆ

ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಮುಂದುವರಿಯುವ ಸೂಚನೆ

ಮಹಮ್ಮದ್ ನೂಮಾನ್
Published 9 ಜೂನ್ 2021, 1:50 IST
Last Updated 9 ಜೂನ್ 2021, 1:50 IST
ಆರ್. ಧ್ರುವನಾರಾಯಣ
ಆರ್. ಧ್ರುವನಾರಾಯಣ   

ಮೈಸೂರು: ಪಾಲಿಕೆ ಮೇಯರ್‌ ಚುನಾವಣೆಗೆ ಎರಡು ದಿನಗಳು ಉಳಿದಿರುವಂತೆಯೇ ಎಲ್ಲ ಮೂರು ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ನಾಲ್ಕು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಜೆಡಿಎಸ್‌ ಪಕ್ಷದ ನಡೆ ಈ ಬಾರಿಯೂ ಕುತೂಹಲ ಮೂಡಿಸಿದೆ.

ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ರದ್ದಾಗಿರುವ ಕಾರಣ ಮೇಯರ್‌ ಚುನಾವಣೆ ನಡೆಯಲಿದ್ದು, ಜೂನ್‌ 11ಕ್ಕೆ ಮುಹೂರ್ತ ನಿಗದಿಯಾಗಿದೆ. 65 ಸದಸ್ಯರ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿವೆ.

ಮೊದಲ ಎರಡು ಅವಧಿಗೆ ಕ್ರಮ ವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೇಯರ್ ಸ್ಥಾನ ಪಡೆದುಕೊಂಡಿತ್ತು. ಒಪ್ಪಂದದ ಪ್ರಕಾರ ಮೂರನೇ ಅವಧಿ ಕಾಂಗ್ರೆಸ್‌ಗೆ ಲಭಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆದ ಬೆಳವಣಿಗೆಗಳಿಂದ ಜೆಡಿಎಸ್‌ನ ರುಕ್ಮಣಿ ಮಾದೇಗೌಡ ಮೇಯರ್‌ ಆಗಿದ್ದರು. ಆದರೆ, ನಾಲ್ಕು ತಿಂಗಳಲ್ಲೇ ಅವರ ಅಧಿಕಾರಕ್ಕೆ ತೆರೆಬಿದ್ದಿದೆ.

ADVERTISEMENT

ಮೇಯರ್‌ ಸ್ಥಾನ ಕಾಂಗ್ರೆಸ್‌ಗೆ: ‘ಪಾಲಿಕೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಮುಂದುವರಿಯಲಿದೆ. ಇನ್ನುಳಿದ ಎಂಟು ತಿಂಗಳ ಅವಧಿಗೆ ಮೇಯರ್‌ ಸ್ಥಾನ ಕಾಂಗ್ರೆಸ್‌ಗೆ ದೊರೆಯಲಿದ್ದು, ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ ಮಂಗಳವಾರ ಹೇಳಿದ್ದಾರೆ.

‘ಸಾ.ರಾ.ಮಹೇಶ್‌ ಅವರು ಈ ಸಂಬಂಧ ನನ್ನೊಂದಿಗೆ ಮಾತನಾ ಡಿದ್ದು, ಇನ್ನುಳಿದ ಅವಧಿಗೆ ಕಾಂಗ್ರೆಸ್‌ನವರು ಮೇಯರ್‌ ಆಗುವುದಾದರೆ ಬೆಂಬಲ ಕೊಡುತ್ತೇವೆ. ಇಲ್ಲದಿದ್ದರೆ, ನಮ್ಮವರೇ ಆಗುತ್ತೇವೆ, ನೀವು ಬೆಂಬಲ ಕೊಡಿ ಎಂಬ ಮಾತನ್ನು ಆಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜತೆ ಮಾತನಾಡಿ ನಿರ್ಧಾರ ತಿಳಿಸುವುದಾಗಿ ಅವರಿಗೆ ಹೇಳಿದ್ದೆ’ ಎಂದರು.

‘ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರಲ್ಲಿ ಈ ಬಗ್ಗೆ ನಾನು ಮಾತನಾಡಿದ್ದೇನೆ. ಉಳಿದ ಎಂಟು ತಿಂಗಳಿಗೆ ಕಾಂಗ್ರೆಸ್‌ನವರು ಮೇಯರ್‌ ಆಗಲಿ ಎಂದು ಅವರಿಬ್ಬರು ಹೇಳಿದ್ದಾರೆ. ಈ ವಿಷಯವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಈಗಾ ಗಲೇ ಸಾ.ರಾ.ಮಹೇಶ್‌ಗೆ ತಿಳಿಸಿದ್ದಾರೆ’ ಎಂದು ಹೇಳಿದರು.

ಜೆಡಿಎಸ್‌ ಷರತ್ತು: ಆದರೆ ಮೇಯರ್‌ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಡುವ ಬಗ್ಗೆ ಜೆಡಿಎಸ್‌ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

‘ಒಪ್ಪಂದದಂತೆ ಮೂರನೇ ಅವಧಿಗೆ ಮೇಯರ್‌ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಿತ್ತು. ಆದರೆ, ಸಿದ್ದರಾಮಯ್ಯ ಅವರು ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡಿದ್ದ ಕಾರಣ ನಾವು ಪಟ್ಟು ಹಿಡಿದು ಮೇಯರ್‌ ಸ್ಥಾನ ಪಡೆದುಕೊಂಡಿದ್ದೆವು. ಇನ್ನುಳಿದ ಅವಧಿಗೆ ಮೇಯರ್‌ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಸಿದ್ಧ. ಆದರೆ ಮುಂದಿನ ಬಾರಿ ಮೇಯರ್‌, ಉಪಮೇಯರ್‌ ಸ್ಥಾನ ಹಾಗೂ ಕೊನೆಯ ಅವಧಿಗೆ ಮೇಯರ್‌ ಸ್ಥಾನ ಜೆಡಿಎಸ್‌ಗೇ ದೊರೆಯಬೇಕು ಎಂಬ ಷರತ್ತನ್ನು ಕಾಂಗ್ರೆಸ್‌ ಮುಂದಿಡಲಾಗುವುದು’ ಎಂದರು.

ಜೆಡಿಎಸ್‌ ಒಪ್ಪಿದರೆ ಮೈತ್ರಿಗೆ ಬಿಜೆಪಿ ಸಿದ್ಧ: ನಾಲ್ಕು ತಿಂಗಳ ಹಿಂದೆ ನಡೆದ ಮೇಯರ್‌ ಚುನಾವಣೆ ವೇಳೆ ಬಿಜೆಪಿಯು ಗೆಲುವಿನ ವಿಶ್ವಾಸದೊಂದಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆದರೆ ಜೆಡಿಎಸ್‌ ಕೊನೆಯ ಕ್ಷಣದಲ್ಲಿ ಕೈಕೊಟ್ಟದ್ದರಿಂದ ಸೋಲು ಉಂಟಾಗಿತ್ತು. ಈ ಬಾರಿಯೂ ಬಿಜೆಪಿ, ಜೆಡಿಎಸ್‌ ಜತೆಗಿನ ಮೈತ್ರಿಗೆ ಎಲ್ಲ ಅವಕಾಶದ ಬಾಗಿಲುಗಳನ್ನು
ತೆರೆದಿದೆ.

‘ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಬುಧವಾರ ನಗರಕ್ಕೆ ಬರಲಿದ್ದು, ಅವರ ನೇತೃತ್ವದಲ್ಲಿ ಶಾಸಕರು, ಸಂಸದರು ಮತ್ತು ಪಾಲಿಕೆ ಸದಸ್ಯರ ಸಭೆ ನಡೆಯಲಿದೆ. ಜೆಡಿಎಸ್‌ನವರು ಒಪ್ಪಿದರೆ ಅವರ ಜತೆ ಮೈತ್ರಿ ಮಾಡಕೊಳ್ಳಬೇಕೇ ಎಂಬುದನ್ನು ಸಭೆಯಲ್ಲಿ ತೀರ್ಮಾನಿಸುತ್ತೇವೆ. ಈ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಅವರ ಸಲಹೆಯನ್ನೂ ಪಡೆಯಲಾಗುವುದು’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್‌.ಶ್ರೀವತ್ಸ ‘ಪ್ರಜಾವಾಣಿ’ಗೆ ತಿಳಿಸಿದರು.

ಜೆಡಿಎಸ್‌ನಲ್ಲೂ ಆಕಾಂಕ್ಷಿಗಳು: ಮೇಯರ್‌ ಸ್ಥಾನ ಜೆಡಿಎಸ್‌ ತನ್ನಲ್ಲೇ ಉಳಿಸಿಕೊಂಡರೆ, ಈ ಹುದ್ದೆಗೇರಲು ಹಲವು ಆಕಾಂಕ್ಷಿಗಳು ಇದ್ದಾರೆ. ಈ ಬಾರಿ ಮೇಯರ್‌ ಸ್ಥಾನ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿದೆ. ನಮ್ರತಾ ರಮೇಶ್‌, ಅಶ್ವಿನಿ ಅನಂತು, ಪ್ರೇಮಾ, ಭಾಗ್ಯಾ ಮಾದೇಶ್, ನಿರ್ಮಲಾ ಹರೀಶ್‌ ಒಳಗೊಂಡಂತೆ ಹಲವು ಮಹಿಳಾ ಸದಸ್ಯರು ಇದ್ದಾರೆ.

ಇನ್ನು ಎಂಟು ತಿಂಗಳು ಮಾತ್ರ ಇದ್ದು, ಈ ಅವಧಿಗೆ ಮೇಯರ್‌ ಆಗಲು ಜೆಡಿಎಸ್‌ನಲ್ಲಿ ಯಾರೂ ಅತಿಯಾದ ಹುಮ್ಮಸ್ಸು ತೋರದ ಕಾರಣದಿಂದಲೇ ಕಾಂಗ್ರೆಸ್‌ಗೆ ಬಿಟ್ಟುಕೊಡಲು ತೀರ್ಮಾನ ಆಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.