ತಲಕಾಡು: ಇಲ್ಲಿನ ಪ್ರಸಿದ್ಧ ಕಾವೇರಿ ನಿಸರ್ಗಧಾಮಕ್ಕೆ ಆಗಮಿಸುವ ಪ್ರವಾಸಿಗರು ನದಿ ನೀರಿಗಿಳಿದು ಮೈಮರೆತು ಆಟವಾಡುತ್ತಿದ್ದು, ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.
ವಾರಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದು, ನೀರಿನ ಮೋಹಕ್ಕೆ ಒಳಗಾಗಿ ನದಿಗೆ ಇಳಿಯುತ್ತಿದ್ದಾರೆ. ನದಿ ಆಳವನ್ನು ಅರಿಯದೆ ನೀರಿನ ಸೆಳೆತಕ್ಕೆ ಸಿಲುಕಿ ಪ್ರತಿ ವರ್ಷ 10ಕ್ಕೂ ಹೆಚ್ಚು ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ನದಿಯಲ್ಲಿ ಮುಳುಗಿ ಸಾಯುವವರ ಸಂಖ್ಯೆಗೆ ಕಡಿವಾಣ ಹಾಕಲು ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವಿಫಲವಾಗಿವೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ನಿಷ್ಕ್ರಿಯವಾಗಿವೆ ಎಂಬ ಆರೋಪ ಸ್ಥಳೀಯರು ಹಾಗೂ ಪ್ರವಾಸಿಗರದ್ದು.
‘ತಲಕಾಡಿನಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಿಲ್ಲ. ಎರಡು ಕಡೆಗಳಲ್ಲಿ ಸುಂಕ ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಸಲಾಘುತ್ತಿದೆ. ಪ್ರಾಣಾಪಾಯ ಸಂಭವಿಸಿದಾಗ ಪ್ರಾಥಮಿಕ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡವರಿದ್ದಾರೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು’ ಎಂದು ಪ್ರವಾಸಿಗರಾದ ಮಹದೇವ್ ಆಗ್ರಹಿಸಿದರು.
ಜಾಗೃತಿ ಫಲಕ: ತಲಕಾಡು, ನದಿ ತೀರ, ಸುಂಕ ಪಡೆಯುವ ಸ್ಥಳ ಹಾಗೂ ದೇವಾಲಯಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಜಾಗೃತಿ ಫಲಕ ಅಳವಡಿಸಿಲ್ಲ. ನೀರಿನ ಆಳವನ್ನು ಅರಿಯದೆ ನದಿಗಿಳಿಯುತ್ತಿದ್ದು, ನೀರಿನ ಸೆಳೆತಕ್ಕೆ ಸಿಕ್ಕಿ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಪ್ರಾಣ ರಕ್ಷಣೆಯಲ್ಲಿ ಅಂಬಿಗರು: ನಿಸರ್ಗಧಾಮದ ನದಿ ತೀರದ ದೋಣಿ ನಡೆಸುವ ಬೆಸ್ತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಪ್ರವಾಸಿಗರ ಜೀವ ರಕ್ಷಣೆಯಲ್ಲಿ ತೊಡಗಿದ್ದಾರೆ. ನೂರಾರು ಪ್ರವಾಸಿಗರ ಪ್ರಾಣವನ್ನು ಉಳಿಸಿದ್ದಾರೆ. ಅವರಿಲ್ಲದಿದ್ದರೆ ಪ್ರತಿನಿತ್ಯ ಪ್ರವಾಸಿಗರ ಸಾವಿನ ಘಟನೆಗಳು ಸಂಭವಿಸುತ್ತಿದ್ದವು ಎನ್ನುತ್ತಾರೆ ಸ್ಥಳೀಯರು.
ನದಿಯಲ್ಲಿ ಮುಳುಗಿ ಸಾಯುವವರ ಸಂಖ್ಯೆ ಹೆಚ್ಚಿದ್ದರೂ ಪ್ರವಾಸಿಗರ ರಕ್ಷಣೆಗೆ ಅರಣ್ಯ ಇಲಾಖೆ ಹಾಗೂ ಗ್ರಾ.ಪಂ ಅಧಿಕಾರಿಗಳು ಗಮನ ಹರಿಸಿಲ್ಲ.- ಎಚ್.ರಾಜು, ಕಾರ್ಯಾಧ್ಯಕ್ಷ ಕಸಾಪ ತಲಕಾಡು ಘಟಕ
‘ಸಾಕಷ್ಟು ಬಿಗಿ ಭದ್ರತೆ ಕೈಗೊಂಡರೂ ಪ್ರವಾಸಿಗರು ಸಿಬ್ಬಂದಿಯ ಕಣ್ತಪ್ಪಿಸಿ ಅಪಾಯದ ಸ್ಥಳಗಳಲ್ಲಿ ಈಜಲು ತೆರಳುತ್ತಿದ್ದಾರೆ. ಇದರಿಂದ ನದಿಯಲ್ಲಿ ಮುಳುಗಿ ಮೃತಪಡುತ್ತಿದ್ದಾರೆ. ಪ್ರವಾಸಿಗರ ರಕ್ಷಣೆಗೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ತಲಕಾಡು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜೆ.ಎನ್.ಆನಂದ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.