ADVERTISEMENT

ಗ್ರಾಮೀಣರಿಗೆ ವರದಾನ ‘ಮೈಕ್ರೊ ಎಟಿಎಂ’

ಮೈಸೂರು ಜಿಲ್ಲೆಯಲ್ಲಿ ಅಂಚೆ ಕಚೇರಿಯಿಂದ ಗ್ರಾಹಕರಿಗೆ ನಿತ್ಯ ₹ 12 ಲಕ್ಷ ಪಾವತಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 8:43 IST
Last Updated 12 ಅಕ್ಟೋಬರ್ 2020, 8:43 IST
ವರುಣಾ ಸಮೀಪದ ದುದ್ದಗೆರೆ ಗ್ರಾಮದ ಅಂಚೆ ಕಚೇರಿಯಲ್ಲಿ ಹಣ ಪಡೆಯಲು ಬಯೋ ಮೆಟ್ರಿಕ್ ನೀಡುತ್ತಿರುವ ಮಹಿಳೆ
ವರುಣಾ ಸಮೀಪದ ದುದ್ದಗೆರೆ ಗ್ರಾಮದ ಅಂಚೆ ಕಚೇರಿಯಲ್ಲಿ ಹಣ ಪಡೆಯಲು ಬಯೋ ಮೆಟ್ರಿಕ್ ನೀಡುತ್ತಿರುವ ಮಹಿಳೆ   

ವರುಣಾ: ಗ್ರಾಮಾಂತರ ಪ್ರದೇಶದಲ್ಲಿ ಬಹಳಷ್ಟು ಕಡೆ ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಎಟಿಎಂ ಕೇಂದ್ರ ಇಲ್ಲದಿರುವುದನ್ನು ಮನಗಂಡು ಗ್ರಾಮೀಣ ಜನರಿಗೆ ಅನುಕೂಲಕ್ಕಾಗಿ ಆಧಾರ್ ಎನೆಬಲ್ ಪೇಮೆಂಟ್ ಸರ್ವಿಸ್ (ಎಇಪಿಎಸ್) ಮೂಲಕ ಹಣ ಪಾವತಿಸುವ ಸೌಲಭ್ಯ ಸಾಕಷ್ಟು ಗ್ರಾಹಕರನ್ನು ಆಕರ್ಷಿಸಿದೆ.

ಭಾರತೀಯ ಅಂಚೆ ಇಲಾಖೆಯ ನಗರ ಅಥವಾ ಗ್ರಾಮೀಣ ಅಂಚೆ ಕಚೇರಿಯಲ್ಲಿ ಯಾವುದೇ ಖಾತೆ ಹೊಂದಿದ್ದವರು ಸರಳವಾಗಿ ಹಣ ಪಡೆಯಬಹುದಾಗಿದೆ.

ಕೇವಲ ಉಳಿತಾಯ ಖಾತೆ, ಆರ್‌ಡಿ, ಮನಿಯಾರ್ಡರ್, ನೋಂದಣಿ ಅಂಚೆ, ಫಿಕ್ಸೆಡ್ ಡೆಪಾಸಿಟ್, ಅಂಚೆ ಪತ್ರಗಳ ವಿಲೇವಾರಿಗೆ ಹೆಸರಾಗಿದ್ದ ಅಂಚೆ ಕಚೇರಿಗಳು ಈಗ ‘ಮೈಕ್ರೊ ಎಟಿಎಂ’ ಯಂತ್ರದ ಸೌಲಭ್ಯವನ್ನು ಪರಿಚಯಿಸಿದ್ದು ತಮ್ಮೂರಿನಲ್ಲೇ ಹಣ ಸೌಲಭ್ಯ ನೀಡುತ್ತಾ ಗ್ರಾಹಕರನ್ನು ತನ್ನಡೆಗೆ ಸೆಳೆಯುತ್ತಿದೆ.

ADVERTISEMENT

ಪ್ರತಿ ಗ್ರಾಹಕರು ಹಣ ಪಡೆಯುವ ಮುನ್ನ ಬ್ಯಾಂಕ್ ಖಾತೆಯಲ್ಲಿ ಹಣವಿರಬೇಕು. ಆ ಖಾತೆಯು ಆಧಾರ್ ಲಿಂಕ್ ಹೊಂದಿರಬೇಕು, ಆಧಾರ್ ಕಾರ್ಡ್‌ ಸಂಖ್ಯೆ ತಿಳಿದಿರಬೇಕು, ಬೇಸಿಕ್ ಮೊಬೈಲ್ ಪೋನ್ ಇರಬೇಕು, ಖಾತೆದಾರರು ಬಯೋಮೆಟ್ರಿಕ್ ನೀಡುವುದರೊಂದಿಗೆ ಬ್ಯಾಂಕ್‌ನಲ್ಲಿರುವ ಹಣದ ಬಗ್ಗೆ ಮಾಹಿತಿ ಬರುತ್ತದೆ. ನಂತರ ಖಾತೆಯಲ್ಲಿ ಹಣವಿದ್ದರೆ ತಕ್ಷಣದಲ್ಲಿ ಹಣ ನೀಡಲಾಗುತ್ತದೆ.

ರಜಾ ದಿನ ಹೊರತುಪಡಿಸಿ ಅಂಚೆ ಕಚೇರಿ ವೇಳೆಯಲ್ಲಿ ಹಣಕಾಸಿನ ವಹಿವಾಟು ನಡೆಸಬಹುದಾಗಿದೆ. ಹಿಂದೆ ಕೇವಲ ದಿನನಿತ್ಯ ಸಾವಿರಾರು ರೂಪಾಯಿ ವಹಿವಾಟು ನಡೆಸುತ್ತಿದ್ದ ಕೆಲವು ಅಂಚೆ ಕಚೇರಿಗಳು, ಪ್ರತಿನಿತ್ಯ ₹ 50 ಸಾವಿರ ವಹಿವಾಟು ನಡೆಸುವ ಮಟ್ಟಕ್ಕೆ ತಲುಪಿವೆ.

ನಗರ ಹಾಗೂ ಗ್ರಾಮೀಣ ಅಂಚೆ ಕಚೇರಿಯಲ್ಲಿ 2019 ಸೆಪ್ಟೆಂಬರ್ ತಿಂಗಳಲ್ಲಿ ಈ ಸೌಲಭ್ಯ ಜಾರಿಗೆ ತರಲಾಗಿದೆ.

ಮೈಸೂರು ಜಿಲ್ಲೆಯಲ್ಲಿ 269 ಅಂಚೆ ಕಚೇರಿಗಳಲ್ಲಿ 204 ಗ್ರಾಮೀಣ ಪ್ರದೇಶಕ್ಕೆ ಸೇರಿವೆ. ಪ್ರತಿನಿತ್ಯ ಸುಮಾರು 400 ಖಾತೆಗಳ ವಹಿವಾಟಿನಿಂದ ₹ 10 ರಿಂದ ₹ 12 ಲಕ್ಷ ಹಣ ಪಾವತಿಯಾಗುತ್ತದೆ ಎನ್ನುತ್ತಾರೆ ಹಿರಿಯ ಅಂಚೆ ವ್ಯವಸ್ಥಾಪಕ ಸುಧಾಕರ್.ಎಚ್ ಎಲ್.

ಕಳೆದ ಲಾಕ್ ಡೌನ್ ಸಮಯದಿಂದ ಸೆಪ್ಟೆಂಬರ್ ಅಂತ್ಯದ ವರಗೆ ವಿವಿದ ಅಂಚೆ ಕಚೇರಿಗಳಲ್ಲಿ ಸುಮಾರು ₹ 12.53 ಕೋಟಿ ವಹಿವಾಟು ನಡೆಸಿದೆ. ಇದರಲ್ಲಿ ಶೇ 90 ಭಾಗ ಗ್ರಾಮೀಣ ಪ್ರದೇಶದ ಕೊಡುಗೆಯಾಗಿದೆ.

‘ಜನರು ಅಂಚೆ ಕಚೇರಿಗಳಲ್ಲಿ ಹಣ ಪಡೆಯಲು ಆಸಕ್ತಿ ಹೊಂದಿದ್ದಾರೆ ಎನ್ನುತ್ತಾರೆ’ ವರುಣಾ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಅನಿತಾ.

ಗ್ರಾಹಕರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ಬಿಟ್ಟು ಅಂಚೆ ಕಚೇರಿಯಲ್ಲಿ ಪ್ರತಿನಿತ್ಯ ಸರಿ ಸುಮಾರು ₹ 50 ಸಾವಿರ ಪಡೆಯುತ್ತಿದ್ದಾರೆ ಎನ್ನುತ್ತಾರೆ ದುದ್ದಗೆರೆ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ರಾಮು.

ಗ್ರಾಮೀಣ ಭಾಗದ ಈ ಸೌಲಭ್ಯದಿಂದ ಅಂಚೆ ಕಚೇರಿಗಳು ಕೂಡ ಹಣಕಾಸಿನ ವಹಿವಾಟಿನ ಕೂಡ ಸ್ವಲ್ಪ ಚೇತರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.