ರೈತರ ಸಮಸ್ಯೆ ಬಗೆಹರಿಸುವುದೇ ಒಕ್ಕೂಟದ ಗುರಿ | ಹೈನುಗಾರಿಕೆ ಮುಖ್ಯ ಕಸುಬಾಗಿಸಲು ಪ್ರೋತ್ಸಾಹ | ಒಕ್ಕೂಟವನ್ನು ಲಾಭದತ್ತ ಕೊಂಡೊಯ್ದ ರೈತರು
ಮೈಸೂರು: ‘ಮೈಮುಲ್‌ನಲ್ಲಿ ನಿತ್ಯ 10 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಲು ಕ್ರಮವಹಿಸಲಾಗುವುದು’ ಎಂದು ಮೈಮುಲ್ ಅಧ್ಯಕ್ಷ ಆರ್.ಚಲುವರಾಜು ಭರವಸೆ ನೀಡಿದರು.
ಸಿದ್ಧಾರ್ಥನಗರದ ಶಿಕ್ಷಕರ ಭವನದಲ್ಲಿ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವು (ಮೈಮುಲ್) ಮಂಗಳವಾರ ಆಯೋಜಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
‘ದಕ್ಷಿಣ ಕನ್ನಡ ಬಿಟ್ಟರೆ ಲೀಟರ್ ಹಾಲಿಗೆ ಅತಿ ಹೆಚ್ಚು ಬೆಲೆಯನ್ನು ಉತ್ಪಾದಕರಿಗೆ ಮೈಮುಲ್ ನೀಡುತ್ತಿದೆ. ರೈತರ ಸಮಸ್ಯೆ ಬಗೆಹರಿಸುವುದೇ ಒಕ್ಕೂಟದ ಗುರಿಯಾಗಿದೆ’ ಎಂದರು.
‘ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಪಶು ಆಹಾರ, ಔಷಧ ದರವೂ ಹೆಚ್ಚಾಗಿದೆ. ಹೀಗಾಗಿ ಹೈನುಗಾರಿಕೆಗೆ ಪ್ರೋತ್ಸಾಹ ಸಿಗಬೇಕೆಂದರೆ ಗ್ರಾಹಕರ ಹಾಲಿನ ದರವೂ ಹೆಚ್ಚಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.
‘ರೈತರು ಹೈನುಗಾರಿಕೆಯನ್ನು ಉಪಕಸುಬಾಗಿಯೇ ಪರಿಗಣಿಸಿದ್ದಾರೆ. ಅದು ಮುಖ್ಯ ಕಸಬಾಗಬೇಕೆಂದರೆ ಲಾಭದ ಪಾಲು ಉತ್ಪಾದಕರಿಗೇ ಹೆಚ್ಚು ತಲುಪಬೇಕಿದೆ’ ಎಂದು ತಿಳಿಸಿದರು.
‘ತಮ್ಮ ಮನೆಗೆ ಹಾಲು ಇರಿಸಿಕೊಳ್ಳದೇ ಒಕ್ಕೂಟಕ್ಕೆ ನೀಡಿದ ಹಲವು ರೈತ ಕುಟುಂಬಗಳಿವೆ. ಅವರೇ ಒಕ್ಕೂಟವನ್ನು ಲಾಭದತ್ತ ಕೊಂಡೊಯ್ದಿದ್ದಾರೆ. ಮೈಮುಲ್ ಕೂಡ ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಮಾರಾಟ ಜಾಲ ವಿಸ್ತರಿಸಲಾಗುವುದು’ ಎಂದರು.
ನಿರ್ದೇಶಕ ಬಿ.ಎನ್.ಸದಾನಂದ ಮಾತನಾಡಿ, ‘ಒಕ್ಕೂಟ ಬೆಳೆಯಲು ಹಾಲು ಶೇಖರಣೆಯಷ್ಟೇ ಸಾಲದು. ಹಾಲಿನ ಗುಣಮಟ್ಟದ ಜೊತೆ ನಂದಿನಿ ಉತ್ಪನ್ನಗಳನ್ನೇ ಬಳಸುವಂತೆ ಜನರಲ್ಲಿ ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು.
‘ಜೀವನಶೈಲಿ ಬದಲಾವಣೆಯಿಂದ ಹೊಸ ರೋಗಗಳು ಬರುತ್ತಿವೆ. ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಅಗತ್ಯ. ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಬೇಕಿದೆ’ ಎಂದರು.
ನಿರ್ದೇಶಕರಾದ ಎ.ಟಿ.ಸೋಮಶೇಖರ್, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂಪ್ರಕಾಶ್, ಪಿ.ಎಂ.ಪ್ರಸನ್ನ, ಕೆ.ಈರೇಗೌಡ, ಕೆ.ಎಸ್.ಕುಮಾರ್, ದ್ರಾಕ್ಷಾಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ್, ಮಾರುಕಟ್ಟೆ ವ್ಯವಸ್ಥಾಪಕರಾದ ಎಚ್.ಕೆ.ಜಯಶಂಕರ್, ಕರಿಬಸವರಾಜು ಪಾಲ್ಗೊಂಡಿದ್ದರು.
ಹಗ್ಗ– ಜಗ್ಗಾಟ ರಂಗೋಲಿ ಸ್ಪರ್ಧೆ
ಹಾಲು ಉತ್ಪಾದಕರಿಗೆ ನಡೆದ ಹಗ್ಗ– ಜಗ್ಗಾಟ ರಂಗೋಲಿ ಸ್ಪರ್ಧೆಗಳಲ್ಲಿ 195 ಮಂದಿ ವಿಜೇತರಿಗೆ ಪದಕ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ಹಾಲು ಉತ್ಪಾದಕರ ಸಂಘಗಳ 1200 ಕಾರ್ಯನಿರ್ವಾಹಕ ಅಧಿಕಾರಿಗಳು ಪಾಲ್ಗೊಂಡಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ಮೈಸೂರು ತಾಲ್ಲೂಕು ಮೈದನಹಳ್ಳಿಯ ಸುಮಲತಾ ಮೊದಲ ಸ್ಥಾನ ಪಡೆದರೆ ಎಚ್.ಡಿ.ಕೋಟೆ ತಾಲ್ಲೂಕಿನ ಮುದ್ದಯ್ಯನಹುಂಡಿಯ ರೇಣುಕಾ ಮತ್ತು ಹುಣಸೂರು ತಾಲ್ಲೂಕಿನ ಹಂಚ್ಯಾ ಗ್ರಾಮದ ಕವಿತಾ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.