ADVERTISEMENT

ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ: ಸಚಿವ ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 13:53 IST
Last Updated 29 ಜೂನ್ 2025, 13:53 IST
<div class="paragraphs"><p>ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಾನುವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಿದ್ಧತೆಗಳನ್ನು ಪರಿಶೀಲಿಸಿ ಭಕ್ತರೊಂದಿಗೆ ಮಾತನಾಡಿದರು</p></div>

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಾನುವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಿದ್ಧತೆಗಳನ್ನು ಪರಿಶೀಲಿಸಿ ಭಕ್ತರೊಂದಿಗೆ ಮಾತನಾಡಿದರು

   

ಮೈಸೂರು: ‘ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರು ಹಾಗೂ ಪ್ರಾವಾಸಿಗರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸುವಂತೆ ಸೂಚಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

ಆಷಾಢದ ಮೊದಲ ಶುಕ್ರವಾರದಂದು ಉಂಟಾಗಿದ್ದ ಅವ್ಯವಸ್ಥೆಯಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಕಾರಣದಿಂದ, ಭಾನುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ADVERTISEMENT

‘ಬೆಟ್ಟದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿರುವ ಕ್ರಮ ಸೂಕ್ತವಾಗಿದ್ದು, ಇದೇ ರೀತಿಯಲ್ಲಿ ಮುಂದುವರಿಸಬೇಕು ಎಂದು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಅನುಕೂಲ ಕಲ್ಪಿಸಿ:

‘ಶುಕ್ರವಾರ, ಶನಿವಾರ ಮತ್ತು ಭಾನುವಾರ ಚಾಮುಂಡೇಶ್ವರಿ ‌ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅವರಿಗೆ ಜಿಲ್ಲಾಡಳಿತ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಅನುಕೂಲ ಮಾಡಿಕೊಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

₹ 2 ಸಾವಿರ ಟಿಕೆಟ್ ಸಾಲು, ₹300 ಟಿಕೆಟ್ ಸಾಲು, ಧರ್ಮದರ್ಶನಕ್ಕೆ ಮಾಡಿರುವ ಸಾಲುಗಳನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಸಚಿವರಿಗೆ ವಿವರಣೆ ನೀಡಿದರು. ₹ 2 ಸಾವಿರ ಟಿಕೆಟ್ ಪಡೆದವರಿಗೆ ದೇವಸ್ಥಾನಕ್ಕೆ ನೇರ ಪ್ರವೇಶವಿದ್ದು, ಒಳಗೆ ಸೇರಿದ ನಂತರ ಎಲ್ಲರೂಟ್ಟಿಗೆ ಸೇರಿ ದರ್ಶನ ಪಡೆಯಬೇಕಿದೆ ಎಂದರು.

ಲಲಿತಮಹಲ್‌ ಮೈದಾನದ ಬಳಿಯ ತಾತ್ಕಾಲಿಕ ಬಸ್‌ನಿಲ್ದಾಣದಿಂದ ನಗರ ಸಾರಿಗೆ ಬಸ್‌ನಲ್ಲಿ ತೆರಳಿದ ಸಚಿವರು, ಬೆಟ್ಟದಲ್ಲಿ ಧರ್ಮ ದರ್ಶನದ ಸರದಿ ಸಾಲಿನಲ್ಲಿ ನಿಂತಿದ್ದವರನ್ನು ಮಾತನಾಡಿಸಿದರು. ಲಲಿತಮಹಲ್ ಮೈದಾನದಲ್ಲಿ ಬಸ್ ಹತ್ತುವುದಕ್ಕೆ ಏನಾದರೂ ತೊಂದರೆ ಆಗಿದೆಯೇ, ಇಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಆರ್.ನಗರದ ವ್ಯಕ್ತಿಯೊಬ್ಬರು, ‘ಶುಕ್ರವಾರ ಹೆಚ್ಚಿನ ಭಕ್ತರು ಸೇರುವ ಕಾರಣ ಭಾನುವಾರ ದರ್ಶನಕ್ಕೆ ಬಂದಿದ್ದೇವೆ, ವ್ಯವಸ್ಥೆ ಉತ್ತಮವಾಗಿದೆ’ ಎಂದರು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ‘ಪಾರ್ಕಿಂಗ್ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಖಾಸಗಿ ವಾಹನಗಳ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಿದ್ದರಿಂದ ಯಾವ ಒತ್ತಡವೂ ಆಗಿಲ್ಲ’ ಎಂದು ತಿಳಿಸಿದರು.

‘ನಿರೀಕ್ಷೆಗೂ ಮೀರಿ ಜನರು ಬರುವ ಕಾರಣ ಅದಕ್ಕೆ ತಕ್ಕ ವ್ಯವಸ್ಥೆ ಮಾಡಬೇಕು. ಸ್ಥಳೀಯ ಗ್ರಾಮಸ್ಥರಿಗೆ ಓಡಾಡಲು ತೊಂದರೆ ಆಗಿರುವ ಬ್ಯಾರಿಕೇಡ್‌ಗಳನ್ನು ತೆಗೆಯಲು ಕ್ರಮ ವಹಿಸಬೇಕು’ ಎಂದು ಸಚಿವರು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್‌, ಡಿಸಿಪಿಗಳಾದ ಎಂ.ಮುತ್ತುರಾಜ್, ಕೆ.ಎಸ್.ಸುಂದರರಾಜ್ ಇದ್ದರು.

ಮಳಿಗೆ ಬಾಗಿಲು ತೆರೆಯಲು ಮನವಿ

ಆಷಾಢ ಮಾಸದ ಪ್ರಯುಕ್ತ ಹೆಚ್ಚಿನ ಜನರು ಸೇರುವ ಕಾರಣ ಚಾಮುಂಡಿ ಬೆಟ್ಟದ ಅಂಗಡಿ ಮಳಿಗೆಗಳ ಬಾಗಿಲು ಹಾಕಿಸಿದ್ದು ಶುಕ್ರವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಅವಕಾಶ ನೀಡುವಂತೆ ವ್ಯಾಪಾರಸ್ಥರು ಸಚಿವರನ್ನು ಕೋರಿದರು. ಮುಖಂಡ ಶಂಭುಲಿಂಗ ಶ್ರೀಧರನಾಯಕ ನೇತೃತ್ವದಲ್ಲಿ ನೂರಾರು ವ್ಯಾಪಾರಿಗಳು ಮನವಿ ಸಲ್ಲಿಸಿದರು. ‘ಆಷಾಢದಲ್ಲಿ ನಡೆಯುವ ವ್ಯಾಪಾರದಿಂದ ಒಂದು ವರ್ಷ ಜೀವನ ಮಾಡಬಹುದು. ಶುಕ್ರವಾರ ಒಂದು ದಿನ ನಾವೇ ಬಾಗಿಲು ಹಾಕಿಕೊಳ್ಳುತ್ತೇವೆ. ತಿಂಗಳಲ್ಲಿ 12 ದಿನಗಳು ಬಾಗಿಲು ಹಾಕಿದರೆ ಕಷ್ಟವಾಗುತ್ತದೆ’ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು ‘ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಮೊದಲು ಭಕ್ತರ ಹಿತ ಕಾಪಾಡಬೇಕು. ಭಕ್ತರನ್ನು ನಂಬಿಕೊಂಡಿರುವ ವ್ಯಾಪಾರಿಗಳಿಗೂ ಅನುಕೂಲ ಮಾಡಿಕೊಡಬೇಕು. ಜಿಲ್ಲಾಧಿಕಾರಿಯೂ ಈ ಬಗ್ಗೆ ಪರಿಶೀಲಿಸಿ ಸಮರ್ಪಕ ತೀರ್ಮಾನ ಕೈಗೊಳ್ಳುವರು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.