ADVERTISEMENT

ಸಹಕಾರ ಕ್ಷೇತ್ರದ ಮೇಲೆ ದಬ್ಬಾಳಿಕೆ

ಸಚಿವ ವೆಂಕಟೇಶ್‌, ಅವರ ಮಗನ ವಿರುದ್ಧ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಆರೋಪ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 3:09 IST
Last Updated 12 ಡಿಸೆಂಬರ್ 2025, 3:09 IST

ಪಿರಿಯಾಪಟ್ಟಣ: ಸಚಿವ ಕೆ. ವೆಂಕಟೇಶ್ ಮತ್ತು ಅವರ ಪುತ್ರ ನಿತಿನ್ ವೆಂಕಟೇಶ್ ಸಹಕಾರ ಇಲಾಖೆಯ ಸಹಾಯಕ ನಿಬಂಧಕರ ಕಚೇರಿಯನ್ನು ಕಾಂಗ್ರೆಸ್ ಪಕ್ಷದ ಕಚೇರಿಯಂತೆ ಬಳಸಿಕೊಂಡು ತಮಗೆ ಇಷ್ಟ ಬಂದಂತೆ ಆದೇಶ ಹೊರಡಿಸುತ್ತಿದ್ದು, ಸಹಕಾರ ತತ್ವಕ್ಕೆ ತಿಲಾಂಜಲಿ ಇಡುತ್ತಿದ್ದಾರೆ ಎಂದು ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಆರೋಪಿಸಿದರು.

ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲ್ಲೂರು ಡೇರಿ ಆಡಳಿತ ಮಂಡಳಿಯನ್ನು ಮತ್ತು ಚಿಕ್ಕನೇರಳೆ ವಿಎಸ್‌ಎಸ್‌ಎನ್‌ ಆಡಳಿತ ಮಂಡಳಿಯನ್ನು ಕ್ಷುಲ್ಲಕ ಕಾರಣಕ್ಕೆ ವಜಾಗೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳು ಆಡಳಿತಾವಧಿ ಮೀರಿದ್ದರೂ ಸಕಾಲದಲ್ಲಿ ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಸಹಕಾರ ಕ್ಷೇತ್ರದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳ ಟಿಎಪಿಸಿಎಂಎಸ್‌ಗಳಿಗೂ ಚುನಾವಣೆ ನಡೆಸಿ ಆಡಳಿತ ಮಂಡಳಿಗಳನ್ನು ಅಸ್ತಿತ್ವಕ್ಕೆ ತಂದಿದ್ದರೂ ತಾಲ್ಲೂಕಿನಲ್ಲಿ ಮಾತ್ರ ಸೋಲಿನ ಭೀತಿಯಿಂದ ಆಡಳಿತ ಮಂಡಳಿಗೆ ಚುನಾವಣೆ ನಡೆಸದೆ ಆಡಳಿತಾಧಿಕಾರಿ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ನಂದಿನಾಥಪುರ ಮತ್ತು ಚಪ್ಪರದಹಳ್ಳಿ ವಿಎಸ್ಎಸ್ಎನ್ ಗಳ ಅವಧಿ ಮುಗಿದಿದ್ದರೂ ಚುನಾವಣೆ ನಡೆಸದೆ ಆಡಳಿತ ಅಧಿಕಾರಿ ನೇಮಕ ಮಾಡಲಾಗಿದೆ ಎಂದು ದೂರಿದರು.

ತಾಲೂಕಿನಲ್ಲಿ 7 ವಿಎಸ್‌ಎಸ್‌ಎನ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಎಲ್ಲೆಲ್ಲಿ ಜೆಡಿಎಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಅವುಗಳನ್ನು  ಉದ್ದೇಶಪೂರ್ವಕವಾಗಿ ಒಡೆದು ಹೊಸದಾಗಿ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ರೈತರ ಮೇಲೆ ಮತ್ತು ಷೇರುದಾರರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ರೈತರು ತಮಗೆ ಇಷ್ಟ ಬಂದ ಸಹಕಾರ ಸಂಘಗಳಲ್ಲಿ ಸಾಲ ಪಡೆದು ವ್ಯವಹರಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ನನ್ನ ತಂದೆ ಕೆ. ಮಹದೇವ್ ಶಾಸಕರಾಗಿದ್ದ ಅವಧಿಯಲ್ಲಿ ರಚಿಸಿದ್ದ ದರಕಾಸ್ತು ಸಮಿತಿಯು ಉಳುಮೆ ಮಾಡುತ್ತಿದ್ದ ಬಡ ರೈತರಿಗೆ ಹಂಚಿಕೆ ಮಾಡಿದ್ದ ಭೂಮಿಯ ಪಹಣಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಈ ಹಿಂದೆ ಮಂಜೂರು ಮಾಡಿದ್ದ ಮನೆ ನಿರ್ಮಾಣ ಅನುದಾನದ ಬಾಕಿ ಕಂತುಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಿಸದೆ ಬಡವರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಆರೋಪಿಸಿದರು.

ಸಹಕಾರ ಒಕ್ಕೂಟದ ಜಿಲ್ಲಾ ನಿರ್ದೇಶಕ ಕುಮಾರ್, ತಾ.ಪಂ ಮಾಜಿ ಸದಸ್ಯ ಎ.ಟಿ. ರಂಗಸ್ವಾಮಿ ಮಾತನಾಡಿದರು. ಜೆಡಿಎಸ್ ಮುಖಂಡರಾದ ಸಿ.ಎನ್ ರವಿ, ಎಸ್. ರಾಮು, ಲೋಕೇಶ್, ಪೆಪ್ಸಿ ಕುಮಾರ್, ಮೋಹನ್, ರಘುನಾಥ್, ಶಿವಣ್ಣ, ಕೆಂಪೇಗೌಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.