ADVERTISEMENT

ಕೆ.ಆರ್.ನಗರ: ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ತಿದ್ದುಪಡಿ ಕಾಯ್ದೆ ರದ್ದುಪಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 6:39 IST
Last Updated 29 ಸೆಪ್ಟೆಂಬರ್ 2020, 6:39 IST
ಕೆ.ಆರ್.ನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷ ತಾಲ್ಲೂಕು ಘಟಕದ ಅಧ್ಯಕ್ಷ ಗರುಡಗಂಬ ಸ್ವಾಮಿ ಮಾತನಾಡಿದರು
ಕೆ.ಆರ್.ನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷ ತಾಲ್ಲೂಕು ಘಟಕದ ಅಧ್ಯಕ್ಷ ಗರುಡಗಂಬ ಸ್ವಾಮಿ ಮಾತನಾಡಿದರು   

ಕೆ.ಆರ್.ನಗರ: ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾದ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕರ ಹಕ್ಕು ತಿದ್ದುಪಡಿ ಕಾಯ್ದೆ ಕೂಡಲೇ ರದ್ದುಪಡಿಸಬೇಕು ಎಂದು ಸ್ವರಾಜ್ ಇಂಡಿಯಾ ಪಕ್ಷ ತಾಲ್ಲೂಕು ಘಟಕದ ಅಧ್ಯಕ್ಷ ಗರುಡಗಂಬ ಸ್ವಾಮಿ ಒತ್ತಾಯಿಸಿದರು.

ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಾಧಕ- ಬಾಧಕಗಳ ಬಗ್ಗೆ ಚರ್ಚಿಸದೇ ಯಾವುದೇ ಕಾನೂನು, ಸುಗ್ರೀವಾಜ್ಞೆ ಹೊರಡಿಸುವುದು ಸರಿಯಲ್ಲ, ಚರ್ಚಿಸದೇ ಯಾವುದೇ ಕಾನೂನುಗಳು ಜಾರಿಗೆ ತರುವುದು ಸೂಕ್ತವಲ್ಲ ಎಂದು ಹೇಳಿದರು.

ADVERTISEMENT

ರೈತ ಸಂಘ ವಿಭಾಗೀಯ ಕಾರ್ಯದರ್ಶಿ ಸರಗೂರು ನಟರಾಜು, ಕಬ್ಬು ಬೆಳೆಗಾರರ ಸಂಘ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಹಳೇ ಮಿರ್ಲೆ ಸುನಯ್ ಗೌಡ ಸೇರಿದಂತೆ ಇತರರು ಮಾತನಾಡಿದರು.

ರೈತ ಸಂಘ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ನೇತ್ರಾವತಿ, ಸಂಘದ ಅಧ್ಯಕ್ಷ ಮಲ್ಲೇಶ್, ಕಬ್ಬು ಬೆಳೆಗಾರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ.ರವೀಂದ್ರ, ಗೌರವ ಅಧ್ಯಕ್ಷ ಮಾರಗೌಡನಹಳ್ಳಿ ನಟರಾಜು, ಮಲ್ಲೇಶ್, ಕಾಳೇಗೌಡ, ವಜ್ರೇಶ್, ಡಿಎಸ್ಎಸ್ ಮೂರ್ತಿ, ರುದ್ರೇಶ್ ಸೇರಿದಂತೆ ಇತರರು ಇದ್ದರು.

ಮೆರವಣಿಗೆಗೆ ಪೊಲೀಸರು ಅವಕಾಶ ನೀಡದೇ ಇರುವುದರಿಂದ ಗರುಡಗಂಬ ವೃತ್ತದ ಬಳಿ ಕೆಲ ಹೊತ್ತು ರಸ್ತೆತಡೆ, ಧರಣಿ ಸತ್ಯಾಗ್ರಹ, ಪ್ರತಿಭಟನೆ ಮಾಡಲಾಯಿತು.

ಬಂದ್‌ಗೆ ಮಿಶ್ರ ಪ್ರತಿಕ್ರಿಯೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಕರೆ ನೀಡಲಾದ ಬಂದ್‌ಗೆ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಂಘಟನೆಗಳ ಸೂಚನೆಯ ಮೇರೆಗೆ ಸೋಮವಾರ ಪಟ್ಟಣದಲ್ಲಿನ ದಿನಸಿ, ತರಕಾರಿ, ಹೂವು, ಹಣ್ಣು ಸೇರಿದಂತೆ ಬಹುತೇಕ ಅಂಗಡಿಗಳು ಮುಚ್ಚಲಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಕೆಲ ವ್ಯಾಪಾರಸ್ಥರು ವ್ಯಾಪಾರ ಮಾಡಿದರು.

ಎಂದಿನಂತೆ ವಾಹನಗಳ ಓಡಾಟ ಇತ್ತು. ಪ್ರಯಾಣಿಕರು ಇಲ್ಲದೇ ಇರುವುದರಿಂದ ಬಸ್ ಸಂಚಾರ ವಿರಳವಾಗಿತ್ತು. ಸರ್ಕಾರಿ ಕಚೇರಿಗಳು, ಪೆಟ್ರೋಲ್ ಬಂಕ್, ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.