ADVERTISEMENT

ಮೈಮುಲ್ ನೇಮಕಾತಿಯಲ್ಲಿ ಅಕ್ರಮ: ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್

ಅಕ್ರಮದ ಆಡಿಯೊ ಬಿಡುಗಡೆ ಮಾಡುವೆ

​ಪ್ರಜಾವಾಣಿ ವಾರ್ತೆ
Published 12 ಮೇ 2020, 15:45 IST
Last Updated 12 ಮೇ 2020, 15:45 IST
ಶಾಸಕ ಸಾ ರಾ ಮಹೇಶ್
ಶಾಸಕ ಸಾ ರಾ ಮಹೇಶ್   

ಮೈಸೂರು: ‘ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿನ (ಮೈಮುಲ್‌) ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ’ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್‌ ಮಂಗಳವಾರ ಇಲ್ಲಿ ದೂರಿದರು.

‘ಯಾರ‍್ಯಾರ ನಡುವೆ ಹಣಕಾಸಿನ ವ್ಯವಹಾರ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಪರೀಕ್ಷೆಯಲ್ಲಿ ಫೇಲಾದ ಅಭ್ಯರ್ಥಿಯಿಂದ ಎಷ್ಟು ಹಣ ಕೇಳಿದ್ದಾರೆ ? ಎಂಬುದರ ಎಲ್ಲಾ ಮಾಹಿತಿಯನ್ನೊಳಗೊಂಡ ಆಡಿಯೊ ಕ್ಯಾಸೆಟ್ ನನ್ನ ಬಳಿಯಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘168 ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಇದೀಗ 25 ಹೆಚ್ಚುವರಿ ಹುದ್ದೆ ಭರ್ತಿ ಮಾಡಿಕೊಳ್ಳಲು ಒಕ್ಕೂಟದ ಆಡಳಿತ ಮಂಡಳಿ ಮುಂದಾಗಿದೆ. ತಮ್ಮ ಸಂಬಂಧಿಕರು, ದುಡ್ಡು ಕೊಟ್ಟವರಿಗೆ ನೌಕರಿ ಕೊಡಲು ಯತ್ನ ನಡೆಸಿದೆ’ ಎಂದು ಆರೋಪಿಸಿದರು.

ADVERTISEMENT

‘ಚಾಮರಾಜನಗರ ಜಿಲ್ಲಾ ಒಕ್ಕೂಟದಲ್ಲಿ ಪರೀಕ್ಷಾ ಅಕ್ರಮ ಎಸಗಿರುವ ಏಜೆನ್ಸಿಗೆ ಇಲ್ಲಿಯೂ ಪರೀಕ್ಷೆ ನಡೆಸಲು ಅವಕಾಶ ಕೊಟ್ಟಿದ್ದಾರೆ. 18 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದಾರೆ. ಪ್ರಾಮಾಣಿಕರು, ಅರ್ಹತೆಯಿದ್ದವರಿಗೆ ವಂಚಿಸಲಾಗುತ್ತಿದೆ. ಈ ನೇಮಕಾತಿ ಪ್ರಕ್ರಿಯೆ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವುದಾಗಿ’ ಶಾಸಕ ಸಾ.ರಾ.ಮಹೇಶ್‌ ತಿಳಿಸಿದರು.

ರೈತರೊಂದಿಗೆ ಚೆಲ್ಲಾಟ: ‘ಕೋವಿಡ್–19 ಹೆಸರೇಳಿಕೊಂಡು ವಾರದ ಹಿಂದಷ್ಟೇ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಮೈಮುಲ್‌ ₹ 2.60 ಕಡಿತಗೊಳಿಸಿತ್ತು. ಇದೀಗ ಮತ್ತೆ ₹ 2 ಕಡಿತಗೊಳಿಸುವ ಮೂಲಕ ರೈತರ ಬಾಳಿನಲ್ಲಿ ಚೆಲ್ಲಾಟವಾಡಲು ಮುಂದಾಗಿದೆ’ ಎಂದು ಶಾಸಕರು ಕಿಡಿಕಾರಿದರು.

‘ಹಾಲಿನ ದರ ಕಡಿತಗೊಳಿಸಿದ್ದು ಸರಿಯಾದ ಕ್ರಮವಲ್ಲ. ಲಕ್ಷ, ಲಕ್ಷ ರೈತರಿಗೆ ಇದರಿಂದ ನಷ್ಟವಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.