ADVERTISEMENT

ಜನರ ದಾರಿ ತಪ್ಪಿಸುತ್ತಿರುವ ಪ್ರಧಾನಿ: ಲಕ್ಷ್ಮಣ್‌

ಆತ್ಮವಂಚನೆ ಬಿಟ್ಟು, ಪ್ರಜೆಗಳ ಹಿತ ಕಾಪಾಡಿ–ಮಂಜುಳಾ ಮಾನಸ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 9:58 IST
Last Updated 3 ಜೂನ್ 2020, 9:58 IST
ಎಂ.ಲಕ್ಷ್ಮಣ್‌
ಎಂ.ಲಕ್ಷ್ಮಣ್‌   

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಮಾತೆತ್ತಿದರೆ 370ನೇ ವಿಧಿ ರದ್ದತಿ, ಪಿಒಕೆ ಬಗ್ಗೆ ಮಾತನಾಡುತ್ತಾರೆ. ಆದರೆ, ಜನರಿಗೆ ನೀಡಿದ ಭರವಸೆಗಳು, ಆರ್ಥಿಕ ಸಂಕಷ್ಟಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಡೀ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಬಿಜೆಪಿಯ 6 ಪ್ರಮಾದಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಪ್ರಮಾದಗಳಿಂದ ಇಡೀ ದೇಶವೇ ನಲುಗುತ್ತಿದೆ. ಜನರು ಈ ಸುಳ್ಳುಗಳನ್ನು ನಂಬದೆ ದನಿ ಎತ್ತಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮನವಿ ಮಾಡಿದರು.

‘ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವಾಗಿ ಹೇಳಿದ್ದರು. ಆದರೆ, ಶೇ 28 ರಷ್ಟು ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯಮಿಗಳ ಸಾಲಮನ್ನಾ ಮಾಡಿದ್ದಾರೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂದಿದ್ದರು. ಆದರೆ, ಬಿಜೆಪಿ ಮಿತ್ರರು ಮಾತ್ರ ವಿಕಾಸವಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಪ್ರಧಾನ ಸೇವಕ್ ಬದಲಿಗೆ ನಿರಂಕುಶಾಧಿಕಾರಿಯಾಗಿದ್ದಾರೆ. ನೋಟು ರದ್ದತಿ, ಜಿಎಸ್‌ಟಿ ಜಾರಿ ಹಾಗೂ ಲಾಕ್‌ಡೌನ್‌ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಭರವಸೆ ನೀಡಿ ಕೃಷಿ ವ್ಯವಸ್ಥೆಯನ್ನೇ ನಾಶಪಡಿಸಿದ್ದಾರೆ. ಜನ ಕೆಲಸ ಕಳೆದುಕೊಳ್ಳುವುದು ಅಚ್ಚೇ ದಿನವೇ’ ಎಂದು ಪ್ರಶ್ನಿಸಿದರು.

ಮಂಜುಳಾ ಮಾನಸ ಮಾತನಾಡಿ, ‘ಕೊರೊನಾ ಸಂಬಂಧಿಸಿದ ಪರಿಕರ ಖರೀದಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಮೋದಿ ಅವರ ಅಸಮರ್ಥ ಆಡಳಿತದಿಂದ ಆರ್ಥಿಕ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ. ಇನ್ನು ಕೆಲ ದಿನಗಳಲ್ಲಿ ಕೋವಿಡ್‌ ಸಾವಿಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಲಿದೆ. ಆತ್ಮವಂಚನೆ ಬಿಟ್ಟು, ಪ್ರಜೆಗಳ ಹಿತ ಕಾಪಾಡಿ’ ಎಂದರು.

ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.