ADVERTISEMENT

ಹುಣಸೂರು: ಅನಾಥ ಶವಗಳ ಅಂತ್ಯಸಂಸ್ಕಾರ ಮಾಡುವ ಮೊಹಮ್ಮದ್ ಅಜರ್‌

ಜಾತಿ, ಧರ್ಮ ಭೇದವಿಲ್ಲದೆ ಅಪರಕರ್ಮ ನಡೆಸುವ ಹುಣಸೂರಿನ ಶಬ್ಬೀರ್ ನಗರದ ನಿವಾಸಿ

ಎಚ್.ಎಸ್.ಸಚ್ಚಿತ್
Published 25 ಫೆಬ್ರುವರಿ 2023, 5:02 IST
Last Updated 25 ಫೆಬ್ರುವರಿ 2023, 5:02 IST
ಹುಣಸೂರು ನಗರದ ಶಬ್ಬೀರ್ ಬಡಾವಣೆ ನಿವಾಸಿ ಮೊಹಮ್ಮದ್ ಅಜರ್ ಅನಾಥ ಶವಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿದ್ದರು
ಹುಣಸೂರು ನಗರದ ಶಬ್ಬೀರ್ ಬಡಾವಣೆ ನಿವಾಸಿ ಮೊಹಮ್ಮದ್ ಅಜರ್ ಅನಾಥ ಶವಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿದ್ದರು   

ಹುಣಸೂರು: ಜಾತಿ, ಧರ್ಮ ಭೇದವಿಲ್ಲದೆ ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಸದ್ಗತಿ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ ಹುಣಸೂರಿನ ಶಬ್ಬೀರ್ ನಗರದ ನಿವಾಸಿ ಮೊಹಮ್ಮದ್ ಅಜರ್.

ಮೊಹಮ್ಮದ್ ರಫಿಕ್ ಅವರ ಮಗನಾದ 24 ವರ್ಷದ ಮೊಹಮ್ಮದ್ ಅಜರ್ ‘ಸ್ನೇಹಜೀವಿ’ ಆಂಬುಲೆನ್ಸ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆ ತಂದೆ ಮೊಹಮ್ಮದ್ ರಫಿಕ್ ಅವರೊಂದಿಗೆ ಲಾರಿ ಚಾಲಕನಾಗಿ ಕೆಲಸಕ್ಕೆ ಸೇರಿದ ಅಜರ್‌, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ನೋಡಿ ಬೇಸರಗೊಂಡು ಲಾರಿ ಚಾಲಕ ವೃತ್ತಿಗೆ ವಿದಾಯ ಹೇಳಿ ಜನ ಸೇವೆಯಲ್ಲಿ ತೊಡಗಿಸಿಕೊಂಡರು. ಕೋವಿಡ್ ಸಮಯದಲ್ಲಿ ಬೆಂಗಳೂರಿನಲ್ಲಿ ಆಂಬುಲೆನ್ಸ್ ಚಾಲಕರಾಗಿದ್ದ ಅಜರ್‌, ಕೊರೊನಾ ಸೋಂಕಿಗೆ ಬಲಿಯಾದ ನೂರಕ್ಕೂ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸಿದ್ದರು.

ADVERTISEMENT

ನಗರ ಹಾಗೂ ತಾಲ್ಲೂಕಿನಲ್ಲಿ ಪತ್ತೆಯಾಗುವ ಅನಾಥ ಹಾಗೂ ಅಪರಿಚಿತ ಶವಗಳನ್ನು ಆಂಬುಲೆನ್ಸ್‌ನಲ್ಲಿ ಶವಾಗಾರಕ್ಕೆ ತಂದು, ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ. ಕಳೆದ ನಾಲ್ಕು ತಿಂಗಳಲ್ಲಿ ಎರಡು ಅನಾಥ ಶವಗಳಿಗೆ ನಗರದ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಶುಕ್ರವಾರ ಭಿಕ್ಷುಕನ ಶವ ಪತ್ತೆಯಾಗಿದ್ದು, ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಶನಿವಾರ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.

‘ಆಂಬುಲೆನ್ಸ್‌ ಸೇವೆಗೆ ದಿನದ 24 ಗಂಟೆಗೂ ಸಿದ್ಧ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಮಂಗಳೂರಿನ ನಿವಾಸಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಗ್ರೀನ್‌ ಕಾರಿಡಾರ್‌ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದೇನೆ’ ಎಂದು ಅಜರ್‌ ತಿಳಿಸಿದರು.

‘ಸಂಚಾರ ನಿಯಮಗಳ ಪಾಲನೆಯಿಂದ ಅಪಘಾತಗಳನ್ನು ತಡೆಯಬಹುದು. ಅತಿ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಯುವಕರ ಪ್ರಮಾಣವೇ ಹೆಚ್ಚಾಗಿದೆ. ಹೀಗಾಗಿ, ಸುರಕ್ಷಿತ ಪ್ರಯಾಣಕ್ಕೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಮೊಹಮ್ಮದ್ ಅಜರ್ ಮೊ.ಸಂ. 9535927543.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.