ಮೈಸೂರು: ‘ಸರ್ಕಾರಗಳ ನೀತಿಗಳು ಉಳ್ಳವರ ಪರವಾಗಿದ್ದು, ದುಡಿಯುವ ರೈತರನ್ನು ಆತ್ಮಹತ್ಯೆಗೆ ತಳ್ಳುತ್ತಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಜಗದೀಶ್ ಸೂರ್ಯ ದೂರಿದರು.
ತಾಲ್ಲೂಕಿನ ವರುಣಾ ಹೋಬಳಿಯ ಆಯರಹಳ್ಳಿ ಗ್ರಾಮದಲ್ಲಿ ಸಂಘದ ಗ್ರಾಮ ಘಟಕ ಸಮ್ಮೇಳನ ಹಾಗೂ ನಾಮ ಫಲಕ ಉದ್ಘಾಟಿಸಿ ಮಾತನಾಡಿದರು.
‘ಬೆಳೆಗಳಿಗೆ ಹೊರಗಿನವರು ಬೆಲೆ ನಿರ್ಧರಿಸುತ್ತಿದ್ದಾರೆ. ಇದರಿಂದ ನಷ್ಟ ಅನುಭವಿಸುವ ರೈತ ಸಾಲದ ಹೊರೆಯಿಂದ ಆತ್ಮಹತ್ಯೆ ದಾರಿ ಹಿಡಿದಿದ್ದಾನೆ. ಬೆಲೆ ನಿಗದಿ ಕಾನೂನು ತರಬೇಕು. ಬಗರ್ ಹುಕುಂ ಜಮೀನಿಗೆ ಸಾಗುವಳಿ ಪತ್ರ ನೀಡಬೇಕು. ಇವುಗಳ ಈಡೇರಿಕೆಗೆ ರೈತರು ಹೋರಾಟಕ್ಕೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.
‘ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ, ಕೋಟ್ಯಾಧಿಪತಿಗಳ ತೆರಿಗೆ ಮನ್ನಾ ಮಾಡುವುದರ ಜೊತೆಗೆ ಶೇ 30 ಇದ್ದ ನೇರ ತೆರಿಗೆಯನ್ನು ಶೇ 26ಕ್ಕೆ ಇಳಿಸಿದೆ. ಆದರೆ, ಕೃಷಿ ವಸ್ತುಗಳ ಬೆಲೆ ಏರಿಸುತ್ತಿದೆ, ಸಬ್ಸಿಡಿಗಳನ್ನೂ ತೆಗೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆಂಪಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ದೂರ ಲೋಕೇಶ್, ಆಯರಹಳ್ಳಿ ಘಟಕದ ಅಧ್ಯಕ್ಷ ಸಣ್ಣನಾಯ್ಕ, ಕಾರ್ಯದರ್ಶಿ ರಂಗರಾಜು, ಮುಖಂಡರಾದ ರಾಜೇಂದ್ರ, ಪಿ.ಬಸವಣ್ಣ, ಮಹದೇವ ನಾಯಕ, ಪೂರ್ಣಚಂದ್ರ, ಚಿಕ್ಕರಂಗಯ್ಯ, ಮಾದಪ್ಪ, ಕೆ.ಮದೇವಯ್ಯ, ಮಂಚಯ್ಯ, ದೊಡ್ಡ ಸ್ವಾಮಿ, ಬೀರಯ್ಯ, ಮಹದೇವ ನಾಯ್ಕ, ಶಿವಣ್ಣ, ಬಾಲರಾಜ್, ಶ್ರೀರಂಗಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.