ADVERTISEMENT

ಕಾನೂನು ಬಾಹಿರವಾಗಿ ₹ 4 ಕೋಟಿ ಮೊತ್ತದ ಕಾಮಗಾರಿ

‘ಮುಡಾ’ ನಿವೃತ್ತ ಅಧಿಕಾರಿ ಪಿ.ಎಸ್.ನಟರಾಜು ಅವರು ನಗರಾಭಿವೃದ್ಧಿ ಇಲಾಖೆ ಆಯುಕ್ತರಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 18:57 IST
Last Updated 29 ಏಪ್ರಿಲ್ 2019, 18:57 IST

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿಯಿಂದ ಕಾನೂನು ಬಾಹಿರವಾಗಿ ಕಾಮಗಾರಿ ನಡೆಸಿದ್ದು, ₹ 4 ಕೋಟಿ ಮೊತ್ತದ ಬಿಲ್ ‍ಪಾವತಿಗೆ ಸಿದ್ಧತೆ ನಡೆದಿದೆ ಎಂದು ‘ಮುಡಾ’ ನಿವೃತ್ತ ಅಧಿಕಾರಿ ಪಿ.ಎಸ್.ನಟರಾಜು ಅವರು ನಗರಾಭಿವೃದ್ಧಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1978ಕ್ಕೆ ವ್ಯತಿರಿಕ್ತವಾಗಿ ಪ್ರಾಧಿಕಾರದ ಉಸ್ತುವಾರಿ ಬಡಾವಣೆ ಹೊರತುಪಡಿಸಿ ನಗರಪಾಲಿಕೆ, ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಪ್ರದೇಶಗಳು, ಲೋಕೋಪಯೋಗಿ ಇಲಾಖೆ ರಸ್ತೆಗಳು, ಖಾಸಗಿ ಬಡಾವಣೆಗಳ ಪ್ರದೇಶ, ರೆವೆನ್ಯೂ ಬಡಾವಣೆ, ಸರ್ಕಾರಿ ಕಟ್ಟಡ, ಖಾಸಗಿ ಸಮುದಾಯ ಭವನ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯ ಪ್ರದೇಶದಲ್ಲಿ ಕಾಮಗಾರಿ ನಡೆಸಲಾಗಿದೆ. ಕಾನೂನಿಗೆ ವ್ಯತಿರಿಕ್ತವಾಗಿರುವ ಕಾರಣ ಬಿಲ್‌ ಮೊತ್ತವನ್ನು ಪಾವತಿ ಮಾಡದಂತೆ ಕೂಡಲೇ ತಡೆಹಿಡಿಯುವಂತೆ ಕೋರಿದ್ದಾರೆ.

ಬಿಲ್ ಮೊತ್ತವನ್ನು ತಡೆ ಹಿಡಿಯದಿದ್ದರೆ ‘ಮುಡಾ’ ವಿರುದ್ಧ ಧರಣಿ ನಡೆಸಲಾಗುವುದು. ಅಲ್ಲದೇ, ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗುವುದು. ಭೂಮಿ ಕಳೆದುಕೊಂಡ ರೈತರಿಗೆ ₹ 11 ಲಕ್ಷ ನೀಡಲು ಹಣ ಇಲ್ಲ ಎಂದು ಹೇಳಿದ್ದ ‘ಮುಡಾ’ಗೆ ಕಾನೂನು ಬಾಹಿರವಾಗಿ ₹ 4 ಕೋಟಿ ಮೊತ್ತದ ಕಾಮಗಾರಿ ನಡೆಸಲು ಹಣವಿದೆಯೇ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ನಗರದ ವಿವಿಧೆಡೆ ಬಡಾವಣೆ ನಿರ್ಮಾಣಕ್ಕಾಗಿ ‘ಮುಡಾ’ ವಶಪಡಿಸಿಕೊಂಡ ಭೂಮಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 2019ರ ಜನವರಿವರೆಗೆ ₹ 266 ಕೋಟಿ ಪರಿಹಾರ ನೀಡಬೇಕು ಎಂದು ಆದೇಶಿಸಿತ್ತು. ಈ ಪರಿಹಾರ ಮೊತ್ತ ನೀಡಲಾಗದೇ ನ್ಯಾಯಾಲಯಕ್ಕೆ ಸಬೂಬು ಹೇಳುತ್ತಿದ್ದ ‘ಮುಡಾ’, 2010ರಿಂದ 2017ರ ಅವಧಿಯಲ್ಲಿ ₹ 406 ಕೋಟಿ ಮೊತ್ತದ ಕಾಮಗಾರಿ ನಡೆಸಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟಿದೆ. ‘ಮುಡಾ’ ಆಯುಕ್ತ ಪಿ.ಎಸ್.ಕಾಂತರಾಜು ಹಾಗೂ ಸಿಬ್ಬಂದಿ ಇದಕ್ಕೆ ಕಾರಣ ಎಂದು ಪತ್ರದಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.