ADVERTISEMENT

ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ: ವಿಶ್ವನಾಥ್‌ಗೆ ಮಂಜೇಗೌಡ ತಿರುಗೇಟು

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 13:39 IST
Last Updated 12 ಜುಲೈ 2024, 13:39 IST
ಸಿ.ಎನ್. ಮಂಜೇಗೌಡ
ಸಿ.ಎನ್. ಮಂಜೇಗೌಡ   

ಮೈಸೂರು: ‘ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ದಾಖಲೆ ಇಟ್ಟುಕೊಂಡು ನನ್ನ ವಿರುದ್ಧ ಆರೋಪ ಮಾಡಲಿ. ಅದನ್ನು ಬಿಟ್ಟು ಸುಮ್ಮನೆ ಮಾತನಾಡುವುದು ಸರಿಯಲ್ಲ’ ಎಂದು ವಿಧಾನಪರಿಷತ್‌ ಜೆಡಿಎಸ್ ಸದಸ್ಯ ಸಿ.ಎನ್. ಮಂಜೇಗೌಡ ತಿರುಗೇಟು ನೀಡಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ವಿಶ್ವನಾಥ್ ಅವರಿಗೆ ಮಾನಸಿಕ ಸಮಸ್ಯೆ ಇದ್ದರೆ ಚಿಕಿತ್ಸೆ ಪಡೆದುಕೊಳ್ಳಲಿ’ ಎಂದು ಲೇವಡಿ ಮಾಡಿದರು.

‘ನಾವು ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿನ ಸಿಎ ನಿವೇಶನ ಮಾರಾಟ ಮಾಡಲಾಗಿದೆ. ಉದ್ಯಾನದ ಜಾಗವನ್ನೂ ನಿವೇಶನಗಳನ್ನಾಗಿ ಮಾರಾಟ ಮಾಡಿ ಅಕ್ರಮ ಎಸಗಲಾಗಿದೆ’ ಎಂದು ವಿಶ್ವನಾಥ್ ಆರೋಪಿಸಿದ್ದಾರೆ. ಆದರೆ, ಸಿಎ ನಿವೇಶನದಲ್ಲಿ ಹಾಸ್ಟೆಲ್ ನಿರ್ಮಾಣವಾಗಿದೆ. ಪಾರ್ಕ್ ಜಾಗಕ್ಕೆ ಮುಡಾ ಬೇಲಿ ಹಾಕಿದೆ. ಅದನ್ನು 20 ವರ್ಷಗಳ ಹಿಂದೆಯೇ ಮುಡಾಕ್ಕೆ ಹಸ್ತಾಂತರಿಸಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

ADVERTISEMENT

‘ನಾನು ಮುಡಾದಿಂದ 104 ನಿವೇಶನ ಪಡೆದಿರುವುದಾಗಿ ಆರೋಪಿಸಿದ್ದಾರೆ. ನಾನು 104 ಇಂಚು ಜಾಗ ಪಡೆದಿದ್ದರೂ ತೋರಿಸಲಿ’ ಎಂದು ಸವಾಲು ಹಾಕಿದರು.

‘ಮುಡಾದಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು ಅದರ ಬಗ್ಗೆ ಎಲ್ಲರೂ ಗಮನ ಹರಿಸಬೇಕು. ದಟ್ಟಗಳ್ಳಿಯಲ್ಲಿ ಕೆಲ ಸರ್ವೆ ನಂಬರ್‌ನಲ್ಲಿನ ನಿವೇಶನಗಳನ್ನು ಯಾರಿಗೂ ಕೊಡಬಾರದೆಂದು ನ್ಯಾಯಾಲಯದ ಆದೇಶವಿದ್ದರೂ ಸೊಸೈಟಿಯೊಂದಕ್ಕೆ ನೀಡಲಾಗಿದೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಪತ್ನಿಗೆ ಭೂಮಿ ಪಡೆದ ಜಾಗದಲ್ಲಿಯೇ ನಿವೇಶನಗಳನ್ನು ನೀಡಬೇಕಾಗಿತ್ತು. ಈಗ ನಡೆದಿರುವುದರಲ್ಲಿ ಮುಡಾ ಅಧಿಕಾರಿಗಳ ಲೋಪವಿದೆ’ ಎಂದು ಪ್ರತಿಕ್ರಿಯಿಸಿದರು.

ಮುಖಂಡರಾದ ದಿವಾಕರ್, ದಿನೇಶ್‌ಕುಮಾರ್, ಜಗದೀಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.