ಎಚ್.ಸಿ. ಮಹದೇವಪ್ಪ
ಮೈಸೂರು: ಇಲ್ಲಿನ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್) ಅಧ್ಯಕ್ಷ ಸ್ಥಾನಕ್ಕೆ ಅ.23ರಂದು ನಡೆಯಲಿರುವ ಚುನಾವಣೆಯಲ್ಲಿ ಎಚ್.ಡಿ.ಕೋಟೆಯ ಕೆ.ಈರೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೂಚಿಸಿದ್ದಾರೆ.
ಇಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ, ಅಧಿಕಾರದ ಹಂಚಿಕೆ ಒಪ್ಪಂದದ ಪ್ರಕಾರ ಉಳಿದ ಅವಧಿಗೆ ಈರೇಗೌಡ ಅವರಿಗೆ ಸ್ಥಾನ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
2021ರ ಮಾರ್ಚ್ 3ರಂದು ನಡೆದಿದ್ದ ಮೈಮುಲ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಬಣದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಮಾರ್ಚ್ 16ರಂದು ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಶಾಸಕರಾಗಿದ್ದ ಕೆ.ಮಹದೇವ ಅವರ ಪುತ್ರ ಪಿ.ಎಂ.ಪ್ರಸನ್ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರು, 2024ರ ಆಗಸ್ಟ್‌ನಲ್ಲಿ ರಾಜೀನಾಮೆ ನೀಡಿದ್ದರು.
ಇದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಆರ್.ಚೆಲುವರಾಜು ಆಯ್ಕೆಯಾಗಿದ್ದರು. ಆ ವೇಳೆ ನಡೆದಿದ್ದ ಅಧಿಕಾರ ಹಂಚಿಕೆ ಸೂತ್ರದಂತೆ ಚೆಲುವರಾಜು ರಾಜೀನಾಮೆ ನೀಡಿದ್ದಾರೆ. ತೆರವಾಗಿರುವ ಸ್ಥಾನಕ್ಕೆ ಇದೇ 23ರಂದು ಚುನಾವಣೆ ನಡೆಯಲಿದ್ದು, ಈರೇಗೌಡ ಅವರ ಆಯ್ಕೆಗೆ ಕಾಂಗ್ರೆಸ್ ವರಿಷ್ಠರು ಒಲವು ತೋರಿದ್ದಾರೆ.
‘ಈ ಹಿಂದೆ ಆಗಿದ್ದ ಒಪ್ಪಂದದಂತೆ ಈರೇಗೌಡ ಅವರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಸೂಚಿಸಿದ್ದಾರೆ’ ಎಂದು ತಿಳಿದುಬಂದಿದೆ.
ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ನಿರ್ದೇಶಕರಾದ ಆರ್.ಚೆಲುವರಾಜು, ಸಿ.ಓಂಪ್ರಕಾಶ್, ಕೆ.ಜಿ.ಮಹೇಶ್, ಕೆ.ಈರೇಗೌಡ, ಬಿ.ಗುರುಸ್ವಾಮಿ, ಮಲ್ಲಿಕಾ ರವಿಕುಮಾರ್, ಪ್ರಕಾಶ್, ನೀಲಾಂಬಿಕೆ ಮಹೇಶ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಶಿವಪ್ರಸಾದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.